ಸಾರಾಂಶ
ನವದೆಹಲಿ: 16 ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಸ್ಥೆಗಳಿಗೆ ನೀಡುವ ಎನ್‌ಐಆರ್‌ಎಫ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ್‍ಯಾಂಕಿಂಗ್ ಫ್ರೇಮ್‌ವರ್ಕ್) ರ್‍ಯಾಂಕಿಂಗ್ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 6 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದುಕೊಂಡಿವೆ. ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸತತ 9ನೇ ಬಾರಿಗೆ ದೇಶದ ಅತ್ಯುತ್ತಮ ವಿವಿ ಎಂಬ ಕೀರ್ತಿಗೆ ಭಾಜನ ಆಗಿದ್ದು ವಿಶೇಷ.
ವಿವಿ ವಿಭಾಗ ಸೇರಿ ಐಐಎಸ್‌ಸಿ ಬೆಂಗಳೂರು 4 ವಿಭಾಗಗಳಲ್ಲಿ ಸ್ಥಾನ ಪಡೆದಿದ್ದರೆ, ನಿಮ್ಹಾನ್ಸ್, ಮಣಿಪಾಲದ ಮಾಹೆ, ಬೆಂಗಳೂರಿನ ಕಾನೂನು ಕಾಲೇಜು, ಬೆಂಗಳೂರಿನ ಐಐಎಂ, ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಸಂಸ್ಥೆಗಳಾಗಿವೆ.ಉಳಿದತೆ ಪಟ್ಟಿಯಲ್ಲಿ ಸಮಗ್ರ ವಿಭಾಗದಲ್ಲಿ ಐಐಟಿ ದೆಹಲಿ, ಎಂಜಿನಿಯರಿಂಗ್ ವಿಭಾಗದಲ್ಲಿ ಸತತ 6ನೇ ಸಲ ಐಐಟಿ ಮದ್ರಾಸ್, ವೈದ್ಯಕೀಯ ವಿಭಾಗದಲ್ಲಿ ದೆಹಲಿ ಏಮ್ಸ್ ಟಾಪರ್‌ಗಳಾಗಿ ಹೊರಹೊಮ್ಮಿವೆ.
ಐಐಎಸ್‌ಸಿಗೆ 4 ಸ್ಥಾನ:
ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಒಟ್ಟು 4 ವಿಭಾಗಗಳಲ್ಲಿ ಬೇರೆ ಬೇರೆ ಸ್ಥಾನ ಪಡೆದಿದೆ. ಸಂಶೋಧನಾ ಸಂಸ್ಥೆಗಳಲ್ಲಿ ನಂ.1., ಅತ್ಯುತ್ತಮ ವಿವಿಗಳಲ್ಲಿ ನಂ.1., ಸಮಗ್ರ ವಿಭಾಗದಲ್ಲಿ ನಂ.2, ನಾವೀನ್ಯತಾ ವಿವಿಗಳ ವಿಭಾಗದಲ್ಲಿ ಐಐಎಸ್‌ಸಿ ನಂ.4 ಸ್ಥಾನ ಪಡೆದಿದೆ.ಇನ್ನು ಟಾಪ್ ಡೆಂಟಲ್ ಕಾಲೇಜು ವಿಭಾಗದಲ್ಲಿ ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನಂ.2 ಸ್ಥಾನ ಪಡೆದಿದೆ. ಜೊತೆಗೆ ವಿವಿಗಳಲ್ಲಿನ ಟಾಪ್ ಸಂಸ್ಥೆಗಳ ಪೈಕಿ ಮಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ 2ನೇ ಸ್ಥಾನ ಪಡೆದಿದೆ.
ಟಾಪ್ ಮೆಡಿಕಲ್ ಕಾಲೇಜುಗಳ ವಿಭಾಗದಲ್ಲಿ ಬೆಂಗಳೂರಿನ ನಿಮ್ಹಾನ್ಸ್ 4ನೇ ಸ್ಥಾನ ಪಡೆದಿದೆ. ಕಾನೂನು ಕಾಲೇಜುಗಳ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ಸ್ಥಾನ ಪಡೆದಿದೆ. ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ಗಳ ಪೈಕಿ ಬೆಂಗಳೂರಿನ ಐಐಎಂ ನಂ.2 ಸ್ಥಾನ ಪಡೆದಿದೆ.