ಸಾರಾಂಶ
ಢಾಕಾ/ಅಗರ್ತಲಾ: ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಸೋಮವಾರ ಬಾಂಗ್ಲಾದೇಶಿ ಹೈಕಮೀಷರ್ ಕಚೇರಿಗೆ ಪ್ರತಿಭಟನಾಕಾರರು ನುಗ್ಗಿ ಗಲಾಟೆ ಮಾಡಿದ ಪ್ರಕರಣವು ಬಾಂಗ್ಲಾ ಹಾಗೂ ಭಾರತದ ನಡುವೆ ಹೊಸ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.
ಮಂಗಳವಾರ ಢಾಕಾದಲ್ಲಿರುವ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಕಚೇರಿಗೆ ಕರೆಸಿಕೊಂಡು, ಘಟನೆ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದೆ ಹಾಗೂ ಗಲಾಟೆಕೋರರ ಮೇಲೆ ಕ್ರಮಕ್ಕೆ ಕೋರಿದೆ. ಇದಕ್ಕೆ ಬಳಿಕ ಸುದ್ದಿಗಾರರ ಎದುರು ಪ್ರತಿಕ್ರಿಯೆ ನೀಡಿದ ವರ್ಮಾ, ‘ಭಾರತ-ಬಾಂಗ್ಲಾ ಬಹುಕೋನದ ಸಂಬಂಧ ಹೊಂದಿವೆ. ಕೇವಲ ಒಂದು ವಿಷಯಕ್ಕೆ ಸಂಬಂಧ ಹಳಸಲು ಸಾಧ್ಯವಿಲ್ಲ’ ಎಂದರು.ಇದರ ಬೆನ್ನಲ್ಲೇ ಅಗರ್ತಲಾದಲ್ಲಿನ ತನ್ನ ದೂತಾವಾಸವನ್ನು ಬಾಂಗ್ಲಾದೇಶ ತಾತ್ಕಾಲಿಕವಾಗಿ ಮುಚ್ಚಿದೆ. ಅಲ್ಲಿ ಸದ್ಯಕ್ಕೆ ಯಾವುದೇ ವೀಸಾ ಹಾಗೂ ಇತರ ಸೌಲಭ್ಯಗಳು ಇರುವುದಿಲ್ಲ ಎಂದು ತಿಳಿಸಿದೆ.
ಭಾರತದ ಕ್ರಮ:ಈ ನಡುವೆ, ಬಾಂಗ್ಲಾ ಸರ್ಕಾರ ಪ್ರತಿಭಟನೆ ಸಲ್ಲಿಸುವ ಮುನ್ನವೇ ತ್ರಿಪುರ ಸರ್ಕಾರವು ಮಂಗಳವಾರ 3 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಮತ್ತು ಕೆಲವು ಹಿರಿಯ ಅಧಿಕಾರಿಯನ್ನು ಅವರ ಹುದ್ದೆಯಿಂದ ಹಿಂತೆಗೆದುಕೊಂಡಿದೆ. ಬಾಂಗ್ಲಾ ದೂತಾವಾಸಕ್ಕೆ ನುಗ್ಗಿ ದಾಂಧಲೆ ಮಾಡಿದ 7 ಜನರನ್ನು ಬಂಧಿಸಿದೆ.
ಸೋಮವಾರವೇ ಭಾರತ ಸರ್ಕಾರ ‘ಇಂಥ ಘಟನೆ ಸಹಿಸಲ್ಲ. ಕ್ರಮ ಕೈಗೊಳ್ಳುತ್ತೇವೆ’ ಎಂದು ಬಾಂಗ್ಲಾಗೆ ಭರವಸೆ ನೀಡಿತ್ತು ಹಾಗೂ ದಿಲ್ಲಿ ಸೇರಿ ಭಾರತದಲ್ಲಿರುವ ಬಾಂಗ್ಲಾ ದೂತಾವಾಸಗಳಿಗೆ ಭದ್ರತೆ ಹೆಚ್ಚಿಸಿತ್ತು.ಸೋಮವಾರ ಏನಾಗಿತ್ತು?:
ಸೋಮವಾರ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬಂಧನವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 50 ಜನರು ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು.ಇಸ್ಕಾನ್ ಸಂತ ದಾಸ್‌ಗೆ ನಿರಾಶೆ: ಜಾಮೀನು ವಿಚಾರಣೆ ಜ.2ಕ್ಕೆ ಮುಂದೂಡಿಕೆ
ಢಾಕಾ: ಬಾಂಗ್ಲಾದೇಶದಲ್ಲಿ ದೇಶದ್ರೋಹ, ಭಯೋತ್ಪಾದನೆ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿರುವ ಹಿಂದೂ ಸಂತ ಹಾಗೂ ಇಸ್ಕಾನ್ ಸದಸ್ಯ ಚಿನ್ಮಯ ಕೃಷ್ಣ ದಾಸ್ ಅವರಿಗೆ ಮಂಗಳವಾರ ನಿರಾಶೆಯಾಗಿದೆ. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಜನವರಿ 2ಕ್ಕೆ ಮುಂದೂಡಲಾಗಿದೆ.ದಾಸ್ ಅವರ ವಕೀಲರ ಮೇಲೆ ಸೋಮವಾರ ರಾತ್ರಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಬೇರೆ ಯಾವುದೇ ವಕೀಲರು ದಾಸ್ ಪರ ವಾದಕ್ಕೆ ಒಪ್ಪಲಿಲ್ಲ. ಹೀಗಾಗಿ ದಾಸ್ ಪರ ಯಾವುದೇ ವಕೀಲರು ಹಾಜರಾಗದ ಕಾರಣ ಚಟ್ಟೋಗ್ರಾಮ ಕೋರ್ಟು ವಿಚಾರಣೆಯನ್ನು 2025ರ ಜ.2ಕ್ಕೆ ಮುಂದೂಡಿತು.ಬಾಂಗ್ಲಾದಲ್ಲಿ ಶಾಂತಿ ಪಡೆ ಕಳುಸಲು ಕೇಂದ್ರದ ಮಧ್ಯಸ್ಥಿಕೆಗೆ ಟಿಎಂಸಿ ಆಗ್ರಹನವದೆಹಲಿ: ಬಾಂಗ್ಲಾದೇಶದಲ ಹಿಂದೂಗಳ ಮೇಲಿನ ದೌರ್ಜನ್ಯ ವಿಚಾರ ಸಂಸತ್‌ನಲ್ಲಿಯೂ ಪ್ರಸ್ತಾಪವಾಗಿದೆ. ಬಾಂಗ್ಲಾದಲ್ಲಿ ಶಾಂತಿ ಕಾಪಾಡಲು ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯನ್ನು ಕಳಿಸಬೇಕು. ಈ ವಿಷಯದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.ಲೋಕಸಭೆಯ ಶೂನ್ಯ ವೇಳೆಯಲ್ಲಿ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಈ ವಿಚಾರವನ್ನು ಪ್ರಸ್ತಾಪಿಸಿದರು. ‘ಬಾಂಗ್ಲಾದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ಹಿಂಸಿಸಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ, ತಕ್ಷಣವೇ ಆ ದೇಶಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸಲು ವಿಶ್ವಸಂಸ್ಥೆಗೆ ಕೇಂದ್ರ ಸರ್ಕಾರ ಮನವಿ ಮಾಡಬೇಕು’ ಎಂದರು.ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ವಿಧಾನಸಭೆ ಅಧಿವೇಶನದಲ್ಲಿ ‘ಬಾಂಗ್ಲಾದಲ್ಲಿ ವಿಶ್ವಸಂಸ್ಥೆಯು ಶಾಂತಿ ಪಾಲನಾ ಪಡೆ ನಿಯೋಜನೆಗೆ ಒತ್ತಡ ಹೇರಬೇಕು’ ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದರು.
==ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಬಗ್ಗೆ ಬ್ರಿಟನ್ ಸಂಸತ್ ಕಳವಳಲಂಡನ್: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಕಾನ್ ಸದಸ್ಯರ ಬಂಧನ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಕಳವಳ ವ್ಯಕ್ತವಾಗಿದೆ.ಮಂಗಳವಾರ ಮಾತನಾಡಿದ ವೆಸ್ಟ್ ಕ್ಷೇತ್ರದಿಂದ ಆಯ್ಕೆಯಾದ ಲೇಬರ್ ಪಕ್ಷದ ಸಂಸದ ಬ್ಯಾರಿ ಗಾರ್ಡಿನರ್, ‘ಬಾಂಗ್ಲಾದಲ್ಲಿ ಹಿಂದೂ ದೇಗುಲಗಳ ಮತ್ತು ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಈ ನಡುವೆ ದೇಶದ್ರೋಹ ಪ್ರಕರಣದಡಿ ಇಸ್ಕಾನ್ ಸದಸ್ಯರನ್ನು ಬಂಧಿಸಲಾಗಿದೆ. ಆದ್ದರಿಂದ ಅವರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತೆಡೆದು, ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಆಗ್ರಹಿಸಿದರು.
==ತಿಲಕ, ಕೇಸರಿವಸ್ತ್ರ ಧರಿಸಬೇಡಿ: ಬಾಂಗ್ಲಾ ಹಿಂದುಗಳಿಗೆ ಇಸ್ಕಾನ್ ಮನವಿಪಿಟಿಐ ಕೋಲ್ಕತಾಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ದಾಳಿಗಳು ನಡೆಯುತ್ತಿರುವ ಕಾರಣ ಸನ್ಯಾಸಿಗಳು ಮತ್ತು ಇಸ್ಕಾನ್ ಅನುಯಾಯಿಗಳು ಕೇಸರಿ ವಸ್ತ್ರ ಮತ್ತು ತಿಲಕವನ್ನು ಸಾರ್ವಜನಿಕವಾಗಿ ಧರಿಸುವುದನ್ನು ಸದ್ಯದ ಮಟ್ಟಿಗೆ ನಿಲ್ಲಿಸಬೇಕು ಎಂದು ಇಸ್ಕಾನ್ ಕೋಲ್ಕತಾ ವಕ್ತಾರ ರಾಧರಮಣ ದಾಸ್ ಕೋರಿದ್ದಾರೆ.ಮಂಗಳವಾರ ಮಾತನಾಡಿದ ಅವರು, ‘ಬಾಂಗ್ಲಾದೇಶದ ಪರಿಸ್ಥಿತಿಯು ಆತಂಕಕಾರಿಯಾಗಿದೆ, ನಮಗೆ ಕರೆ ಮಾಡಿದ ಸನ್ಯಾಸಿಗಳು ಮತ್ತು ಭಕ್ತರು, ಇಸ್ಕಾನ್ ಅನುಯಾಯಿಗಳು ಅಥವಾ ಸನ್ಯಾಸಿಗಳಿಗೆ ತಮ್ಮ ಗುರುತನ್ನು ಸಾರ್ವಜನಿಕವಾಗಿ ಮರೆಮಾಡಲು ನಾವು ಹೇಳಿದ್ದೇವೆ. ಮನೆಗಳಲ್ಲಿ ಅಥವಾ ದೇವಾಲಯಗಳ ಒಳಗೆ ಆಚರಣೆ ಮಾಡೋಣ. ಸದ್ಯದ ಮಟ್ಟಿಗೆ ಸಾರ್ವಜನಿಕ ಪ್ರದರ್ಶನ ಬೇಡ ಎಂದು ಕೋರಿದ್ದೇವೆ’ ಎಂದರು.
==ಭಾರತದ ಚಾನೆಲ್‌ಗಳ ನಿಷೇಧ ಕೋರಿ ಬಾಂಗ್ಲಾ ಹೈಕೋರ್ಟ್‌ಗೆ ಅರ್ಜಿಪಿಟಿಐ ಢಾಕಾಬಾಂಗ್ಲಾದೇಶದಲ್ಲಿ ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.ದೇಶದ ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳಲ್ಲಿ ಬಾಂಗ್ಲಾ ವಿರೋಧಿ ಪ್ರಚೋದನಕಾರಿ ಸುದ್ದಿಗಳು ಪ್ರಸಾರ ಆಗುತ್ತಿವೆ. ಈ ಚಾನಲ್‌ಗಳು ಯಾವುದೇ ನಿಯಮಗಳಿಗೆ ಬದ್ಧವಾಗಿಲ್ಲ. ಹೀಗಾಗಿ ಅವುಗಳ ಪ್ರಸಾರವನ್ನು ನಿಷೇಧಿಸಬೇಕು. ಸ್ಟಾರ್ ಜಲ್ಶಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಮತ್ತು ಇತರ ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.