ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸ್ಥಳೀಯ ನ್ಯಾಯಾಲಯ ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸ್ಥಳೀಯ ನ್ಯಾಯಾಲಯ ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪುರ್ಬಚೋಲ್‌ನಲ್ಲಿರುವ ರಾಜುಕ್ ನ್ಯೂ ಟೌನ್ ಯೋಜನೆಯಡಿ ಭೂಮಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಎಸಗಿದ ಎರಡು ಪ್ರಕರಣಗಳಲ್ಲಿ ತಲಾ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ. ಪ್ರಕರಣದಲ್ಲಿ ಹಸೀನಾರ ಸೋದರಳಿಯ ರದ್ವಾನ್ ಮುಜಿಬ್ ಸಿದ್ದಿಕ್, ಅವರ ಸೊಸೆಯರಾದ ಟುಲಿಪ್ ರಿಜ್ವಾನಾ ಸಿದ್ದಿಕ್, ಅಜ್ಮಿನಾ ಸಿದ್ದಿಕ್ ಇತರರಿಗೂ ಶಿಕ್ಷೆ ವಿಧಿಸಲಾಗಿದೆ.

==

ಅಮೆಜಾನ್‌ ಬಳಿಕ ಈಗ ಒರಾಕಲ್‌ನಲ್ಲಿ 30000 ಉದ್ಯೋಗಿಗಳಿಗೆ ಕೊಕ್‌

ನವದೆಹಲಿ: ಟೆಕ್‌ ಕಂಪನಿಗಳಲ್ಲಿ ಉದ್ಯೋಗ ವಜಾ ಪರ್ವ ಮುಂದುವರೆದಿದ್ದು, ಅಮೆಜಾನ್‌ ಬಳಿಕ ಒರಾಕಲ್‌ ಕೂಡ ತನ್ನ ಸಂಸ್ಥೆಯಿಂದ 20,000 ರಿಂದ 30,000 ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡುವುದಕ್ಕೆ ಮುಂದಾಗಿದೆ. ವೆಚ್ಚ ಕಡಿತ ಮತ್ತು ಹೊಸ ಎಐ ಡೇಟಾ ಕೇಂದ್ರ ಸ್ಥಾಪನೆಯ ವೆಚ್ಚ ನಿರ್ವಹಣೆಗಾಗಿ ಅದು ಈ ಕ್ರಮ ಕೈಗೊಂಡಿದೆ. ಒರಾಕಲ್‌ ಕಳೆದ ಕೆಲ ವರ್ಷಗಳಿಂದ ಹಣಕಾಸಿನ ಒತ್ತಡ ಎದುರಿಸುತ್ತಿತ್ತು. ಹೀಗಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿ ಅದನ್ನು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್‌ಗಳ ಸ್ಥಾಪನೆಗೆ ಬಳಸಲು ಮುಂದಾಗಿದೆ ಎನ್ನಲಾಗಿದೆ. ಅಮೆಜಾನ್ ಇತ್ತೀಚೆಗಷ್ಟೇ 16,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿತ್ತು.

==

ಬಜೆಟ್‌ ಶಾಕ್‌ಗೆ 1546 ಅಂಕ ಕುಸಿದಿದ್ದ ಸೆನ್ಸೆಕ್ಸ್‌ ನಿನ್ನೆ 940 ಅಂಕ ನೆಗೆತ

ಮುಂಬೈ: ಬಜೆಟ್‌ ದಿನವಾದ ಭಾನುವಾರ 1546 ಅಂಕಗಳ ಭಾರೀ ಕುಸಿತ ಕಂಡಿದ್ದ ಸೆನ್ಸೆಕ್ಸ್‌ ಸೋಮವಾರ 943 ಅಂಕಗಳ ಉತ್ತಮ ಚೇತರಿಕೆ ಕಂಡು 81666 ಅಂಕಗಳಲ್ಲಿ ಮುಕ್ತಾಯವಾಗಿದೆ. ಮತ್ತೊಂದೆಡೆ ನಿಫ್ಟಿ 262.95 ಅಂಕ ಜಿಗಿದು 25,088.40ಕ್ಕೆ ಏರಿಕೆಯಾಗಿದೆ. ಭಾನುವಾರದ ಭಾರೀ ಕುಸಿತದ ಪರಿಣಾಮ ಅದರ ಲಾಭ ಪಡೆಯಲು ಹೂಡಿಕೆದಾರರು ಮುಂದಾಗಿದ್ದು, ಕಚ್ಚಾತೈಲ ಬೆಲೆ ಕುಸಿತ ಮತ್ತು ಚಿನ್ನ ಹಾಗೂ ಬೆಳ್ಳಿಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು ಷೇರುಪೇಟೆ ಏರಿಕೆಗೆ ಕಾರಣವಾಗಿದೆ. ಸೋಮವಾರ ಐಟಿ, ಆಟೋಮೊಬೈಲ್‌, ಆರೋಗ್ಯ ವಲಯದ ಷೇರುಗಳು ಉತ್ತಮ ಏರಿಕೆ ಕಂಡವು.

==

ಹಾವಿಗಿಂತ ಭಾರತೀಯ ಡೇಂಜರಸ್‌: ನಾರ್ವೆಯ ಮಾಜಿ ದೂತ ರೋಡ್‌

ನವದೆಹಲಿ: ‘ಹಾವು ಮತ್ತು ಭಾರತೀಯ ಒಟ್ಟಿಗೆ ಬಂದರೆ, ಮೊದಲು ಭಾರತೀಯನನ್ನು ಕೊಲ್ಲಿ’ ಎಂದು ನಾರ್ವೆಯ ಮಾಜಿ ರಾಯಭಾರಿ ಟೆರ್ಜೆ ರೋಡ್‌ ಲಾರ್ಸನ್ಸ್‌ 10 ವರ್ಷಗಳ ಹಿಂದೆ ಆಡಿದ್ದ ಮಾತೊಂದು ಇದೀಗ ಎಪ್‌ಸ್ಟೀನ್‌ ಫೈಲ್‌ ಮೂಲಕ ಬೆಳಕಿಗೆ ಬಂದಿದೆ. ಟೆರ್ಜೆ ಅವರು ಎಪ್‌ಸ್ಟೀ್‌ಗೆ ಕಳಿಸಿದ್ದ ಇ-ಮೇಲ್‌ ಬಹಿರಂಗವಾಗಿದೆ. ಅದರಲ್ಲಿ ಟೆರ್ಜೆ, ‘ಒಬ್ಬ ಭಾರತೀಯ ಮತ್ತು ಹಾವು ಒಟ್ಟಿಗೆ ಕಾಣಿಸಿಕೊಂಡಾಗ ಮೊದಲು ಭಾರತೀಯನನ್ನು ಕೊಲ್ಲು ಎಂಬ ಮಾತನ್ನು ಕೇಳಿದ್ದೀರಾ!’ ಎಂದು ಬರೆದಿದ್ದರು. ಭಾರತೀಯರು ಹಾವಿಗಿಂತಲೂ ಅಪಾಯಕಾರಿ ಎಂಬರ್ಥದಲ್ಲಿ ಹೀಗೆ ಹೇಳಿದ್ದರು.

==

ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಬ್ಯೂಟಿಫುಲ್‌ ಇಂಡಿಯನ್‌ ಮಾಡೆಲ್‌ ಹೆಸ್ರು ಪ್ರಸ್ತಾಪ

ನವದೆಹಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಹಾಗೂ ಆತನ ಹಗರಣಗಳಿಗೆ ಸಂಬಂಧಿಸಿದ 30 ಲಕ್ಷ ಪುಟಗಳ ಫೈಲ್‌ನಲ್ಲಿ ಭಾರತೀಯ ಮಾಡೆಲ್‌ನ ಹೆಸರೂ ತಳುಕು ಹಾಕಿಕೊಂಡಿದೆ. ಶುಕ್ರವಾರ ಬಿಡುಗಡೆಯಾದ ಫೈಲ್‌ನಲ್ಲಿ ಅನಾಮಧೇಯ ವ್ಯಕ್ತಿಯೋರ್ವ ಎಪ್‌ಸ್ಟೀನ್‌ಗೆ ಕಳಿಸಿದ್ದ ಇಮೇಲ್‌ ಸಂದೇಶದಲ್ಲಿ, ‘ದುಬೈನಲ್ಲಿ ‘ಬ್ಯೂಟಿಫುಲ್‌ ಇಂಡಿಯನ್‌ ಮಾಡೆಲ್‌’ (ಸುಂದರ ಭಾರತೀಯ ರೂಪದರ್ಶಿ) ಇದ್ದಾಳೆ. ಅವಳ ಸಂಪರ್ಕ ಮಾಡಿಕೊಡು. ಆಕೆಯ ವಿಡಿಯೋ ನೋಡು’ ಎಂದು ಬರೆಯಲಾಗಿತ್ತು. ಜತೆಗೆ ಅನಾಮಧೇಯ ವ್ಯಕ್ತಿಯು ಯುಟ್ಯೂಬ್‌ ಲಿಂಕ್‌ ಸಹ ಅಂಟಿಸಿದ್ದು ಬಹಿರಂಗವಾಗಿದೆ. ಇದರಿಂದಾಗಿ, ಭಾರತೀಯ ಮಾಡೆಲ್‌ಗಳೂ ಎಪ್‌ಸ್ಟೀನ್‌ ಜಾಲಕ್ಕೆ ಸಿಲುಕಿದ್ದಿರಬಹುದು ಎಂಬ ಚರ್ಚೆ ಶುರುವಾಗಿದೆ.