ಬಂಗಾಳದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಮುಸ್ಲಿಂ ಯುವಕರನ್ನು ನೇಮಿಸಲು ಅವರನ್ನು ಮೂಲಭೂತವಾದಿಗಳಾಗಿ ಪರಿವರ್ತಿಸಲು ಪಾಕಿಸ್ತಾನ ಪ್ರಾಯೋಜಿತ ಷಡ್ಯಂತ್ರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ರಾಷ್ಟ್ರೀಯ ತನಿಖಾ ದಳ ವಿಶೇಷ ಕೋರ್ಟ್ 10 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿದೆ.
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಮುಸ್ಲಿಂ ಯುವಕರನ್ನು ನೇಮಿಸಲು ಮತ್ತು ಅವರನ್ನು ಮೂಲಭೂತವಾದಿಗಳಾಗಿ ಪರಿವರ್ತಿಸಲು ಪಾಕಿಸ್ತಾನ ಪ್ರಾಯೋಜಿತ ಷಡ್ಯಂತ್ರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ವಿಶೇಷ ಕೋರ್ಟ್ ಕರ್ನಾಟಕದ ಉಗ್ರನಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 70,000 ರು. ದಂಡ ವಿಧಿಸಿದೆ.
ಉಗ್ರನ ಹೆಸರು ಸಯ್ಯದ್ ಎಂ. ಇದ್ರಿಸ್
ಉಗ್ರನ ಹೆಸರು ಸಯ್ಯದ್ ಎಂ. ಇದ್ರಿಸ್ (33). ಈತ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯವನು.
ಲಷ್ಕರ್ ಸಂಘಟನೆಗೆ ಯುವಕರನ್ನು ಸೇರಿಸಲು ಪಿತೂರಿ ನಡೆಸಿದ ಆರೋಪ ಹೊತ್ತಿದ್ದ ಈತನನ್ನು ಇನ್ನೊಬ್ಬ ಆರೋಪಿ ತಾನಿಯಾ ಪರ್ವಿನ್ ಜೊತೆ 2020ರಲ್ಲಿ ಬಂಧಿಸಲಾಗಿತ್ತು. 2020ರ ಏಪ್ರಿಲ್‌ನಲ್ಲಿ ಪ. ಬಂಗಾಳ ಪೊಲೀಸರಿಂದ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿತ್ತು. ಇದೀಗ ಆರೋಪ ಸಾಬೀತಾಗಿ ಭಾರತೀಯ ದಂಡ ಸಂಹಿತೆ ಹಾಗೂ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಪರ್ವಿನ್ ವಿಚಾರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಷ್ಕರ್ ಸಂಘಟನೆಗೆ ಉಗ್ರರ ನೇಮಕ
ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ನಡೆಸುತ್ತಿದ್ದ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಇದ್ರಿಸ್ ಗುರುತಿಸಿಕೊಂಡಿದ್ದ. ಈ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯುವಕರನ್ನು ಭಯೋತ್ಪಾದನೆ ಕೃತ್ಯ ನಡೆಸುವ ಸಲುವಾಗಿ ಲಷ್ಕರ್ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಇದ್ರಿಸ್‌ನನ್ನು 2020ರಲ್ಲಿ ಬಂಧಿಸಲಾಗಿತ್ತು.
- ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯಿಂದ ವಿವಿಧ ಜಾಲತಾಣ ನಿರ್ವಹಣೆ
- ಅವುಗಳಲ್ಲಿ ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಸಯ್ಯದ್ ಎಂ. ಇದ್ರೀಸ್ ಎಂಬ ಉಗ್ರ
- ಲಷ್ಕರ್ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಮಾಯಕ ಯುವಕರ ನೇಮಕಾತಿ
- ದೇಶದ ವಿರುದ್ಧ ಭಯೋತ್ಪಾದನೆ ಕೃತ್ಯಗಳ ನಡೆಸಲು ಯುವಕರನ್ನು ಮೂಲಭೂತವಾದಿ ಮಾಡುತ್ತಿದ್ದ
- ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. 2020ರಲ್ಲಿ ಉತ್ತರಕನ್ನಡದಲ್ಲಿ ಇದ್ರಿಸ್ ಬಂಧನ
- ಇದೀಗ ಎನ್‌ಐಎ ಕೋರ್ಟ್‌ನಿಂದ ಇದ್ರಿಸ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 70 ಸಾವಿರ ರು. ದಂಡ
