ಸಾರಾಂಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಬಾಂಗ್ಲಾದ ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕ ಭಾವೇಶ್ ಚಂದ್ರ ರಾಯ್ (58) ಅವರನ್ನು ಅಪಹರಿಸಿ ಭೀಕರವಾಗಿ ಗುರುವಾರ ಹತ್ಯೆ ಮಾಡಿದ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಬಾಂಗ್ಲಾದ ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕ ಭಾವೇಶ್ ಚಂದ್ರ ರಾಯ್ (58) ಅವರನ್ನು ಅಪಹರಿಸಿ ಭೀಕರವಾಗಿ ಗುರುವಾರ ಹತ್ಯೆ ಮಾಡಿದ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
‘ಬಾಂಗ್ಲಾದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಗುರಿ ಮಾಡಿ ದಾಳಿ ಮಾಡಲಾಗುತ್ತಿದೆ. ಇಷ್ಟಾದರೂ ಅಲ್ಲಿನ ಮಧ್ಯಂತರ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಈಗಲಾದರೂ ದಾಳಿಗೆ ತಡೆ ನೀಡಿ’ ಎಂದು ತಾಕೀತು ಮಾಡಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾವೇಶ್ ಚಂದ್ರ ರಾಯ್ ಅವರ ಬರ್ಬರ ಹತ್ಯೆಯು ಬಾಂಗ್ಲಾ ಮಧ್ಯಂತರ ಸರ್ಕಾರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಹಿಂಸಾಚಾರದ ಮಾದರಿಯಲ್ಲೇ ನಡೆದಿದೆ. ಇಷ್ಟಾದರೂ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ನಾವು ಈ ಘಟನೆ ಖಂಡಿಸುತ್ತೇವೆ, ಅಲ್ಲಿನ ಮಧ್ಯಂತರ ಸರ್ಕಾರ ಯಾವುದೇ ನೆಪ ಹೇಳದೆ ಹಿಂದೂಗಳು ಸೇರಿ ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.
ಬಾಂಗ್ಲಾದ ಪೂಜಾ ಉದ್ಯಾಪನ್ ಪರಿಷತ್‌ನ ಬಿರಾಲ್ ವಿಭಾಗದ ಉಪಾಧ್ಯಕ್ಷರಾಗಿದ್ದ ಭಾವೇಶ್ ಚಂದ್ರ ರಾಯ್ ಅವರನ್ನು ಗುರುವಾರ ಸಂಜೆ 2 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಮನೆಯಿಂದ ಅಪಹರಿಸಿ, ನರಬಾರಿ ಎಂಬಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಪ್ರಜ್ಞೆ ತಪ್ಪಿದ್ದ ಅವರನ್ನು ಬಳಿಕ ಮನೆ ಬಳಿ ಬಿಟ್ಟು ಹೋಗಿದ್ದಾರೆ. ರಾಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹತ್ಯೆ ಖಂಡಿಸಿದ ಕಾಂಗ್ರೆಸ್:
ಬಾಂಗ್ಲಾದಲ್ಲಿ ಹಿಂದೂಗಳನ್ನು ಗುರಿಮಾಡಿಕೊಂಡು ನಡೆಸುತ್ತಿರುವ ದಾಳಿಗೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ವಿಚಾರದಲ್ಲಿ ಭಾರತ ಸುಮ್ಮನೆ ಕೈಕಟ್ಟಿ ಕೂರಬಾರದು, ಬಾಂಗ್ಲಾ ಸರ್ಕಾರದ ಜತೆಗೆ ಮಾತುಕತೆ ನಡೆಸಬೇಕು ಎಂದು ಮೋದಿ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಮುಖ್ಯವಾಗಿ ಹಿಂದೂ ಸಹೋದರರು ಮತ್ತು ಸಹೋದರಿಯರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಭಾವೇಶ್ ಚಂದ್ರ ರಾಯ್ ಅವರ ಭೀಕರ ಹತ್ಯೆ ಬಾಂಗ್ಲಾದ ಮಧ್ಯಂತರ ಸರ್ಕಾರದ ಜತೆಗಿನ ಮೋದಿ ಭೇಟಿ ವಿಫಲವಾಗಿದ್ದಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕೂಡ ಹಿಂದೂ ಮುಖಂಡನ ಹತ್ಯೆ ಖಂಡಿಸಿದ್ದಾರೆ. ಬಾಂಗ್ಲಾದಲ್ಲಿರುವ ಹಿಂದೂಗಳ ಜತೆಗೆ ಕಾಂಗ್ರೆಸ್ ನಿಲ್ಲುತ್ತದೆ ಎಂದು ಹೇಳಿದ್ದಾರೆ.