ಮಾಜಿ ಪ್ರಧಾನಿ ಶೇಖ್‌ ಹಸೀನಾ ಗಡೀಪಾರು ಮಾಡಿ : ಭಾರತಕ್ಕೆ ಬಾಂಗ್ಲಾದೇಶ ಸರ್ಕಾರದ ಪತ್ರ

| Published : Dec 24 2024, 12:49 AM IST / Updated: Dec 24 2024, 03:35 AM IST

ಸಾರಾಂಶ

‘ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಗಡೀಪಾರಿಗೆ ಬಾಂಗ್ಲಾದೇಶ ಸರ್ಕಾರದ ಕೋರಿಕೆ ಬಂದಿದೆ. ಆದರೆ ಸಮಯದಲ್ಲಿ, ಈ ವಿಷಯದ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ’ ಭಾರತದ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ.

ನವದೆಹಲಿ: ‘ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಗಡೀಪಾರಿಗೆ ಬಾಂಗ್ಲಾದೇಶ ಸರ್ಕಾರದ ಕೋರಿಕೆ ಬಂದಿದೆ. ಆದರೆ ಸಮಯದಲ್ಲಿ, ಈ ವಿಷಯದ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ’ ಭಾರತದ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ.

ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾರನ್ನು ಗಡೀಪಾರು ಮಾಡುವಂತೆ ಕೋರಿ ಭಾರತಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮಂಗಳವಾರ ಹೇಳಿದೆ. ಹಸೀನಾ ಪಲಾಯನ ನಂತರ ಅಧಿಕೃತವಾಗಿ ಭಾರತಕ್ಕೆ ಬಾಂಗ್ಲಾದೇಶವು ಹಸ್ತಾಂತರ ಕೋರಿದ್ದು ಇದೇ ಮೊದಲು.

ಬಾಂಗ್ಲಾದಲ್ಲಿ ಮೀಸಲು ವಿರೋಧಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಬೆನ್ನಲ್ಲೇ ಆ.5ರಂದು ದೇಶ ತೊರೆದ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ನರಮೇಧದ ಆರೋಪದಡಿ ಅಂರಾತಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಹಸೀನಾ ಹಾಗೂ ಕೆಲ ಮಾಜಿ ಸಚಿವರು, ಸಲಹೆಗಾರರು, ಸೇನಾಧಿಕಾರಿಗಳ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಷಿದ್‌ ಹುಸೇನ್‌, ‘ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಹಸೀನಾರನ್ನು ಬಾಂಗ್ಲಾಗೆ ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿದ್ದೇವೆ’ ಎಂದರು. ‘ಭಾರತ ಹಾಗೂ ಬಾಂಗ್ಲಾ ನಡುವೆ ಹಸ್ತಾಂತರದ ಒಪ್ಪಂದವಿದೆ. ಈ ಪ್ರಕ್ರಿಯೆಯಲ್ಲಿ ಸಹಕರಿಸಲು ಭಾರತದ ವಿದೇಶಾಂಗ ಇಲಾಖೆಯಲ್ಲಿ ಮನವಿ ಮಾಡಿದ್ದೇವೆ’ ಎಂದು ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್‌ ಆಲಂ ಹೇಳಿದ್ದಾರೆ.

ಕಳೆದ ತಿಂಗಳು ಮಧ್ಯಂತರ ಸರ್ಕಾರ 100 ದಿನ ಪೂರೈಸಿದ ಸಂದರ್ಭದಲ್ಲಿ, ‘ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮಕ್ಕಳು ಹಾಗೂ ಕಾರ್ಮಿಕರು ಸೇರಿದಂತೆ ಸುಮಾರು 1,500 ಮಂದಿ ಸಾವನ್ನಪ್ಪಿದ್ದು, 19,931 ಜನ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ಎಲ್ಲರಿಗೂ ನ್ಯಾಯ ಒದಗಿಸಬೇಕಿದೆ. ಇದಕ್ಕಾಗಿ ಹಸೀನಾರನ್ನು ಬಾಂಗ್ಲಾಗೆ ಒಪ್ಪಿಸುವಂತೆ ಭಾರತಕ್ಕೆ ಮನವಿ ಮಾಡುತ್ತೇವೆ’ ಎಂದು ಹಸೀನಾ ನಂತರ ದೇಶದ ಚುಕ್ಕಾಣಿ ಹಿಡಿದಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಹೇಳಿದ್ದರು. ಜತೆಗೆ, ಭಾರತದಲ್ಲಿದ್ದುಕೊಂಡು ಹಸೀನಾ ರಾಜಕೀಯ ಹೇಳಿಕೆಗಳನ್ನು ಕೊಡುವುದನ್ನೂ ಅವರು ಖಂಡಿಸಿದ್ದರು.

ಪಾಕ್‌ ವಸ್ತು ಆಮದಿಗೆ ಬಾಂಗ್ಲಾ ಸರ್ಕಾರದಿಂದ ಒತ್ತಡ: ಭಾರತಕ್ಕೆ ಆತಂಕ

ಢಾಕಾ: ಶೇಖ್‌ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಭಾರತ ವಿರೋಧಿ ಹೆಜ್ಜೆಗಳನ್ನಿಡುತ್ತಿದೆ. ಅದಕ್ಕೀಗ ಮತ್ತೊಂದು ಸೇರ್ಪಡೆಯೆಂಬಂತೆ, ಭಾರತದಿಂದ ಆಮದಾಗುವ ಸಾಮಗ್ರಿಗಳ ಮೇಲೆ ಅವಲಂಬಿತವಾಗಿದ್ದ ಬಾಂಗ್ಲಾದ ವ್ಯಾಪಾರಿಗಳಿಗೆ ಇನ್ನುಮುಂದೆ ಪಾಕಿಸ್ತಾನದಿಂದ ಹೆಚ್ಚಿಗೆ ಆಮದು ಮಾಡಿಕೊಳ್ಳುವಂತೆ ಸರ್ಕಾರ ಒತ್ತಡ ಹೇರುತ್ತಿರುವುದು ವರದಿಯಾಗಿದೆ.ಯೂನಸ್‌ ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌ರನ್ನು ಭೇಟಿಯಾಗಿ ಉಭಯ ದೇಶಗಳ ಸಂಬಂಧವನ್ನು ಬಲಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ, ಅಗತ್ಯ ಕೈಗಾರಿಕಾ ವಸ್ತುಗಳನ್ನೊಳಗೊಂಡ 811 ಕಂಟೇನರ್‌ಗಳನ್ನು ಹೊತ್ತ ಹಡಗು ಕರಾಚಿಯಿಂದ ಬಾಂಗ್ಲಾದ ಚಿತ್ತಗಾಂಗ್‌ ಬಂದರು ತಲುಪಿದೆ.

ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಪ್ರಮುಖವಾಗಿದ್ದ ಚಿತ್ತಗಾಂಗ್‌ ಬಂದರು ಇದೀಗ ಶತ್ರುಗಳ ಕೈಸೇರಿರುವುದು ಭಾರತದ ಪಾಲಿಗೆ ಕಳವಳಕಾರಿ ವಿಷಯವಾಗಿದೆ.