ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕು ದಾಳಿ ನಡೆದ 70 ತಾಸಿನ ಬಳಿಕ ದಾಳಿಕೋರನ ಬಂಧನ

| Published : Jan 20 2025, 01:33 AM IST / Updated: Jan 20 2025, 04:12 AM IST

ಸಾರಾಂಶ

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕು ದಾಳಿ ನಡೆದ 70 ತಾಸಿನ ಬಳಿಕ ದಾಳಿಕೋರನ ಬಂಧನವಾಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 31 ವರ್ಷದ ವ್ಯಕ್ತಿಯನ್ನು ಮುಂಬೈ ಸನಿಹದ ಥಾಣೆಯಲ್ಲಿ ಶನಿವಾರ ತಡರಾತ್ರಿ ಸೆರೆ  

 ಮುಂಬೈ : ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕು ದಾಳಿ ನಡೆದ 70 ತಾಸಿನ ಬಳಿಕ ದಾಳಿಕೋರನ ಬಂಧನವಾಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 31 ವರ್ಷದ ವ್ಯಕ್ತಿಯನ್ನು ಮುಂಬೈ ಸನಿಹದ ಥಾಣೆಯಲ್ಲಿ ಶನಿವಾರ ತಡರಾತ್ರಿ ಸೆರೆ ಹಿಡಿಯಲಾಗಿದ್ದು, ಇದರೊಂದಿಗೆ ಪ್ರಕರಣ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ಲಭಿಸಿದೆ.

ಶರೀಫುಲ್‌ ಇಸ್ಲಾಂ ಶೆಹಜಾದ್‌ ಮೊಹಮ್ಮದ್‌ ರೋಹಿಲ್ಲಾ ಅಮೀನ್‌ ಫಕೀರ್‌ (31) ಬಂಧಿತ ಆರೋಪಿ.

‘ಈತ ಭಾರತಕ್ಕೆ ಬಂದ ನಂತರ ವಿಜಯ ದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ ಹಾಗೂ 5 ತಿಂಗಳಿಂದ ಮುಂಬೈಲ್ಲಿದ್ದ. ನಟನ ಮನೆಯೆಂದು ತಿಳಿಯದೇ ಕಳ್ಳತನದ ಉದ್ದೇಶದಿಂದ ಈತ ನುಗ್ಗಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆದರೂ ಈತ ಬಾಂಗ್ಲಾದೇಶದಿಂದ ನುಸುಳಿ ಬಂದಿರುವ ಕಾರಣ ಅಂತಾರಾಷ್ಟ್ರೀಯ ಸಂಚು ದೃಷ್ಟಿಯಲ್ಲೂ ತನಿಖೆ ನಡೆಸಲಾಗುತ್ತದೆ’ ಎಂದು ಪೊಲೀಸ್‌ ಪರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಆದರೆ, ಆರೋಪಿ ಪರ ವಕೀಲರು, ‘ಈತ ಬಾಂಗ್ಲಾ ನಾಗರಿಕ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. 7 ವರ್ಷದಿಂದ ಮುಂಬೈನಲ್ಲಿದ್ದ’ ಎಂದಿದ್ದಾರೆ.

ಆದರೂ ಮುಂಬೈ ಕೋರ್ಟು, ಆರೋಪಿಯನ್ನು ಜ.24ರ ವರೆಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಬಂಧನ ಹೇಗೆ?:

ದಾಳಿಕೋರನನ್ನು ಥಾಣೆ ಜಿಲ್ಲೆಯ ಘೋದ್‌ಬಂದರ್‌ ರೋಡ್‌ನಲ್ಲಿರುವ ಹೀರಾನಂದಾನಿ ಎಸ್ಟೇಟ್‌ನ ಪೊದೆಗಳಲ್ಲಿ ಬಂಧಿಸಲಾಗಿದೆ. ಸಿಸಿಟೀವಿ ದೃಶ್ಯಾವಳಿ ಆಧರಿಸಿ ಹಾಗೂ ಮೊಬೈಲ್‌ ಲೊಕೇಶನ್‌ ಆಧರಿಸಿ ಫಕೀರ್‌ನನ್ನು ಶೋಧಿಸುತ್ತಿದ್ದ ಪೊಲೀಸರಿಗೆ ಈತನ ಸುಳಿವು ಲಭಿಸಿದ್ದು, ಅದನ್ನು ಆಧರಿಸಿ ಪೊದೆಯಲ್ಲಿ ಅವಿತಿದ್ದ ಆತನನ್ನು ಬಂಧಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 311(ಅಪಾರ ಹಾನಿ ಅಥವಾ ಸಾವನ್ನುಂಟುಮಾಡುವ ಉದ್ದೇಶದ ದರೋಡೆ), 331(4) (ಮನೆಗೆ ಕನ್ನ ಹಾಕುವುದು) ಸೇರಿದಂತೆ ಸೂಕ್ತ ಸೆಕ್ಷನ್‌ಗಳು ಹಾಗೂ ಪಾಸ್‌ಪೋರ್ಟ್‌ ಕಾಯ್ದೆ, 1967 ಅಡಿ ಪ್ರಕರಣ ದಾಖಲಿಸಲಾಗಿದೆ.

‘ಆರೋಪಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ. ಆಗ ಈತ ಬಳಸಿದ್ದ ಕಡತಗಳನ್ನು ಸಂಗ್ರಹಿಸಲು ಯತ್ನಿಸುತ್ತಿದ್ದೇವೆ. ಜತೆಗೆ, ಆತ ನಟನ ಮನೆಯೊಳಗೆ ಪ್ರವೇಶಿಸಿದ ಬಗೆಯನ್ನು ತಿಳಿಯಲು ಖಾರ್‌ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಹೆಸರು ಬದಲಿಸಿಕೊಂಡಿದ್ದ ಆರೋಪಿ:

ಬಾಂಗ್ಲಾದೇಶ ಮೂಲದವನಾಗಿರುವ ಆರೋಪಿ ಕಳೆದ 5 ತಿಂಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಹೌಸ್ ಕೀಪಿಂಗ್‌ ಏಜೆನ್ಸಿ ಸೇರಿಕೊಂಡು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ಭಾರತಕ್ಕೆ ಬರುತ್ತಿದ್ದಂತೆ ಈತ ತನ್ನ ಹೆಸರನ್ನು ಶರೀಫುಲ್‌ ಇಸ್ಲಾಂ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮೀನ್‌ ಫಕೀರ್‌ ಬದಲು ವಿಜಯ್‌ ದಾಸ್‌ ಎಂದು ಬದಲಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜ.16ರ ರಾತ್ರಿ 2:30ಕ್ಕೆ ಸೈಫ್‌ ಮನೆ ‘ಸತ್ಗುರು ಶರಣ್‌’ ಪ್ರವೇಶಿಸಿದ್ದ ಆರೋಪಿ, ಸೈಫ್‌ರ ಮೇಲೆ ಹಲವು ಬಾರಿ ಚೂರಿಯಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದ.

ಎಸಿ ಡಕ್ಟ್ ಮೂಲಕ ಸೈಫ್ ಮನೆಗೆ ಪ್ರವೇಶ!

ಮುಂಬೈ: ನಟ ಸೈಫ್‌ ಅಲಿ ಖಾನ್ ಅವರಿಗೆ ಚೂರಿ ಹಾಕಿದ್ದ ಆರೋಪಿ ಫಕೀರ್, ತಾನು ಎಸಿ ಡಕ್ಟ್‌ ಮೂಲಕ ಅವರ ಮನೆಗೆ ಪ್ರವೇಶಿಸಿದ್ದೆ ಎಂದು ಹೇಳಿದ್ದಾನೆ.

ಪೊಲೀಸ್‌ ವಿಚಾರಣೆ ವೇಳೆ ಹಲವು ವಿಷಯಗಳನ್ನು ಹೇಳಿರುವ ಆತ, ‘ಕಟ್ಟಡದ ಒಳಗೆ ಹೋಗಲು ಹಿಂಬದಿಯ ಮೆಟ್ಟಿಲು ಮತ್ತು ಹವಾನಿಯಂತ್ರಣ ಡಕ್ಟ್ ಬಳಸಿದ್ದೇನೆ, ಘಟನೆಯ ನಂತರ ಟಿವಿ ಸುದ್ದಿಗಳಲ್ಲಿ ತನ್ನ ಚಿತ್ರಗಳನ್ನು ನೋಡಿ ಥಾಣೆಗೆ ಓಡಿಹೋದೆ ಹಾಗೂ ಮೊಬೈಲ್ ಸ್ವಿಚ್‌ ಆಫ್ ಮಾಡಿದೆ’ ಎಂದಿದ್ದಾನೆ.ಆತ ಕಟ್ಟಡವನ್ನು ಪ್ರವೇಶಿಸಿದ್ದು ಇದೇ ಮೊದಲ ಬಾರಿ ಎಂದು ಪೊಲೀಸರು ಹೇಳಿದ್ದು, ತನಿಖೆ ವೇಳೆ ದೃಶ್ಯ ಮರುಸೃಷ್ಟಿ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.