ಸಾರಾಂಶ
ಭಾರತದ ಹಲವು ನಗರಗಳ ಮೇಲೆ ಭಾರೀ ಡ್ರೋನ್, ಕ್ಷಿಪಣಿ ದಾಳಿ ನಡೆಸಿದ್ದ ಪಾಕಿಸ್ತಾನ, ಇದೀಗ ಅಂಥ ದಾಳಿ ನಡೆದೇ ಇಲ್ಲ ಎಂದು ಕಥೆಕಟ್ಟುತ್ತಿದೆ.
ಇಸ್ಲಾಮಾಬಾದ್: ಭಾರತದ ಹಲವು ನಗರಗಳ ಮೇಲೆ ಭಾರೀ ಡ್ರೋನ್, ಕ್ಷಿಪಣಿ ದಾಳಿ ನಡೆಸಿದ್ದ ಪಾಕಿಸ್ತಾನ, ಇದೀಗ ಅಂಥ ದಾಳಿ ನಡೆದೇ ಇಲ್ಲ ಎಂದು ಕಥೆಕಟ್ಟುತ್ತಿದೆ. ‘ಭಾರತೀಯ ಮಾಧ್ಯಮಗಳ ಇಂಥ ಆರೋಪ ಆಧಾರರಹಿತವಾಗಿದ್ದು, ಇದು ಅಪಪ್ರಚಾರ ಆಂದೋಲನದ ಭಾಗ’ ಎಂದು ಅವಲತ್ತುಕೊಂಡಿದೆ. ಜತೆಗೆ, ಇಂಥ ಅಪಪ್ರಚಾರವು ಪ್ರಾದೇಶಿಕ ಶಾಂತಿಗೆ ಅಡ್ಡಿಯುಂಟು ಮಾಡಲಿದೆ ಎಂದೂ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಗುರುವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಆಕ್ಷೇಪ ಎತ್ತಿದೆ.
ಜಮ್ಮು, ಪಠಾಣ್‌ಕೋಟ್, ಉಧಂಪುರ ಸೇರಿ ಭಾರತದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ಬುಧವಾರ ರಾತ್ರಿ ಮತ್ತು ಗುರುವಾರ ರಾತ್ರಿ ಭಾರೀ ಡ್ರೋನ್, ಕ್ಷಿಪಣಿ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಹೇಳಿಕೊಂಡಿತ್ತು. ‘ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಆದರೆ, ಪಾಕಿಸ್ತಾನ ಹಾರಿಬಿಟ್ಟ ಎಲ್ಲ ಡ್ರೋನ್, ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ’ ಎಂದು ಸೇನೆ ಹೇಳಿಕೊಂಡಿತ್ತು.
ಆದರೆ, ಪಾಕಿಸ್ತಾನದ ವಿದೇಶಾಂಗ ಸಚಿವ ಮಾತ್ರ ಈ ಆರೋಪವನ್ನು ತಿರಸ್ಕರಿಸಿದೆ. ‘ನಾವು ಆ ರೀತಿ ದಾಳಿ ನಡೆಸಿಯೇ ಇಲ್ಲ. ಭಾರತವು ಯಾವುದೇ ಪಾಕಿಸ್ತಾನದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದೆ. ಇದು ಭಾರತದ ಆಕ್ರಮಶೀಲತೆಯ ಭಾಗವಾಗಿದೆ. ಈ ಮೂಲಕ ಅಸ್ಥಿರತೆ ಸೃಷ್ಟಿಗೆ ನೆರೆಯ ದೇಶ ಯತ್ನಿಸುತ್ತಿದೆ’ ಎಂದು ದೂರಿದೆ.
‘ಈ ರೀತಿಯ ಆತಂಕಕಾರಿ ವರ್ತನೆಯನ್ನು ಅಂತಾರಾಷ್ಟ್ರೀಯ ಸಮುದಾಯಗಳು ಗಂಭೀರವಾಗಿ ಪರಿಗಣಿಸಬೇಕು, ಸಂಯಮ ಮತ್ತು ಜಾವಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಬುದ್ಧಿ ಹೇಳಬೇಕು. ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯನ್ನು ಕಾಯ್ದುಕೊಳ್ಳಲು ಇಂಥ ಸುಳ್ಳಿನ ಬೆದರಿಕೆಗೆ ನಾವು ಸೂಕ್ತ ಪ್ರತ್ಯುತ್ತರ ನೀಡಲಿದ್ದೇವೆ. ಪಾಕಿಸ್ತಾನವು ಶಾಂತಿಗೆ ಬದ್ಧವಾಗಿದೆ. ಆದರೆ ಯಾವುದೇ ಪ್ರಚೋದನೆ, ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ’ ಎಂದು ಹೇಳಿಕೊಂಡಿದೆ.