ಸಾರಾಂಶ
ಕೋಲ್ಕತಾ: ಟಿಎಂಸಿ ನಾಯಕರ ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಆಕ್ರೋಶಗೊಂಡ ಸ್ಥಳೀಯರು ರೇಪ್ ಆರೋಪಿ ಟಿಎಂಸಿ ನಾಯಕರಿಗೆ ಸೇರಿದ ಆಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ಶುಕ್ರವಾರ ಮುಂಜಾನೆ ಪ್ರತಿಭಟನಾನಿರತರು ಟಿಎಂಸಿ ನಾಯಕರ ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದಾರೆ.
ಅಲ್ಲದೆ, ಇದೇ ವೇಳೆ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಡಿಗೆಗಳನ್ನು ಹಿಡಿದುಕೊಂಡಿದ್ದ ಗುಂಪು ಬೆಳ್ಮಜೂರ್ ಶಿಪ್‌ಯಾರ್ಡ್ ಬಳಿ ಮನೆಗಳಿಗೆ ಬೆಂಕಿ ಹಚ್ಚಿದೆ.
ಇನ್ನು ಪೊಲೀಸರು ಬರದಂತೆ ಅನೇಕ ಕಡೆ ಬ್ಯಾರಿಕೇಡ್‌ಗಳನ್ನು ಪ್ರತಿಭಟನಾಕಾರರು ಹಾಕಿದ್ದಾರೆ.
‘ವರ್ಷಗಳಿಂದ ಇಲ್ಲಿ ಅನ್ಯಾಯ ನಡೆಯುತ್ತಿದ್ದರೂ ಸಹ ಪೊಲೀಸರು ಏನೂ ಮಾಡುತ್ತಿಲ್ಲ.
ಹೀಗಾಗಿ ನಾವು ಇದನ್ನೆಲ್ಲಾ ಮಾಡುತ್ತಿದ್ದೇವೆ’ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಬಿಜೆಪಿ ನಿಯೋಗಕ್ಕೆ ತಡೆ: ಸಂದೇಶ್‌ಖಾಲಿಗೆ ಭೇಟಿ ನೀಡುತ್ತಿದ್ದ ಬಿಜೆಪಿಯ ಮಹಿಳಾ ನಿಯೋಗವನ್ನು ಪೊಲೀಸರು ತಡೆದಿದ್ದಾರೆ.
ಬಳಿಕ ಪ್ರತಿಕ್ರಿಯಿಸಿರುವ ನಿಯೋಗ, ಸತ್ಯವನ್ನು ಮುಚ್ಚಿಡುವುದಕ್ಕಾಗಿ ರಾಜ್ಯ ಸರ್ಕಾರ ನಮ್ಮನ್ನು ತಡೆಯುತ್ತಿದೆ ಎಂದು ಆರೋಪಿಸಿದೆ.
ಇದರ ನಡುವೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ 6 ಮಂದಿಯ ತಂಡ ಭೇಟಿ ನೀಡಿದ್ದು, ಪರಿಸ್ಥಿತಿಯ ಮಾಹಿತಿ ಕಲೆಹಾಕಿದೆ.