ಬಂಗಾಳ ವಕ್ಫ್‌ ಹಿಂಸೆಗೆ ಬೆಚ್ಚಿ ಹಿಂದೂಗಳ ಗುಳೆ - ಪ್ರಾಣಭೀತಿಯಿಂದ ಮನೆ ಬಿಟ್ಟ 400 ಹಿಂದೂಗಳು

| N/A | Published : Apr 14 2025, 07:37 AM IST

West Bengal: 3 people killed in Dhuliyan, Murshidabad in wake of mob violence against the Waqf (Amendment) Act

ಸಾರಾಂಶ

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್‌ನಲ್ಲಿ ನಡೆದ ಭಾರೀ ಹಿಂಸಾಚಾರದ ಪರಿಣಾಮ ನೂರಾರು ಸಂತ್ರಸ್ತ ಹಿಂದೂ ಕುಟುಂಬಗಳು ಪ್ರಾಣಭೀತಿಯಿಂದಾಗಿ ನೆರೆಯ ಮಾಲ್ಡಾ ಜಿಲ್ಲೆಗೆ ಪಲಾಯನ ಮಾಡಿವೆ. ಜನರ ಪಲಾಯನದ ಬಗ್ಗೆ ಸ್ವತಃ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಕೋಲ್ಕತಾ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್‌ನಲ್ಲಿ ನಡೆದ ಭಾರೀ ಹಿಂಸಾಚಾರದ ಪರಿಣಾಮ ನೂರಾರು ಸಂತ್ರಸ್ತ ಹಿಂದೂ ಕುಟುಂಬಗಳು ಪ್ರಾಣಭೀತಿಯಿಂದಾಗಿ ನೆರೆಯ ಮಾಲ್ಡಾ ಜಿಲ್ಲೆಗೆ ಪಲಾಯನ ಮಾಡಿವೆ. ಜನರ ಪಲಾಯನದ ಬಗ್ಗೆ ಸ್ವತಃ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಈ ನಡುವೆ, ‘ನೆರೆಯ ಮಾಲ್ಡಾಕ್ಕೆ ನದಿ ದಾಟಿಕೊಂಡು 400ಕ್ಕೂ ಹೆಚ್ಚು ಹಿಂದೂಗಳ ಜೀವಭೀತಿಯಿಂದ ಪಲಾಯನ ಮಾಡಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಂಡಿದೆ’ ಎಂದು ವಿಪಕ್ಷ ಬಿಜೆಪಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಈ ನಡುವೆ ಭಾನುವಾರದ ವೇಳೆಗೆ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆಯಾದರೂ ಜಿಲ್ಲೆಯಲ್ಲಿ ಸದ್ಯ ಬೂದಿಮುಚ್ಚಿದ ಕೆಂಡದ ರೀತಿಯಲ್ಲಿ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಭದ್ರತಾ ಪಡಗಳು ಹೆಚ್ಚುವರಿ 5 ತುಕಡಿಯನ್ನು ಜಿಲ್ಲೆಗೆ ನಿಯೋಜಿಸಲಾಗಿದೆ.

150 ಜನರ ಬಂಧನ:

ಕಳೆದ 2 ದಿನಗಳಿಂದ ಮುರ್ಷಿದಾಬಾದ್‌ನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ವಾಹನ, ಕಟ್ಟಡ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಗುರಿಯಾಗಿಸಿ ದಾಳಿ ಮಾಡಿದ್ದಲ್ಲದೇ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸದ್ಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಹಿಂಸಾಚಾರದಲ್ಲಿ ತೊಡಗಿದ್ದ 150 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪಲಾಯನ:

‘ಹಿಂಸಾಚಾರದಿಂದ ಜೀವ ಉ‍ಳಿಸಿಕೊಳ್ಳಲು ಹಿಂದೂಗಳು ರಾತ್ರೋರಾತ್ರಿ ನದಿದಾಟಿ ಪಲಾಯನ ಮಾಡಿದ್ದಾರೆ. ಪರ್‌ ಲಾಲ್‌ಪುರ್‌ ಹೈಸ್ಕೂಲ್‌, ದಿಯೋನಾಪುರ್‌-ನೋವಾಪುರ್‌ ಜಿಪಿ, ಬೈಸ್ನಾಬ್‌ನಗರ್‌, ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದಾರೆ. ಮುರ್ಷಿದಾಬಾದ್‌ನ ಸ್ಥಿತಿ ಆತಂಕ ಹುಟ್ಟಿಸುವಂತಿದೆ. ಬಂಗಾಳಿ ಹಿಂದುಗಳು ಶಂಷೇರ್‌ಗಂಜ್‌ನ ದುಲಿಯಾನ್‌ನಿಂದ ಬೋಟ್‌ ಮೂಲಕ ಪರ್ಲಾಲ್‌ಪುರ್‌ ಗ್ರಾಮಕ್ಕೆ ಪಲಾಯನ ಮಾಡಿದ್ದಾರೆ’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಓಲೈಕೆಯ ರಾಜಕಾರಣದಿಂದಾಗಿ ಮೂಲಭೂತವಾದಿಗಳಿಗೆ ಧೈರ್ಯ ಬಂದಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಕೇಂದ್ರೀಯ ಪಡೆಗಳು ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ನನ್ನ ಮನೆಗೆ ಬೆಂಕಿ ಇಡಲಾಯಿತು, ಅಲ್ಲೇ ಇದ್ದ ಪೊಲೀಸರು ರಕ್ಷಣೆಗೆ ಏನೂ ಮಾಡಲಿಲ್ಲ, ಬದಲಾಗಿ ಗಲಭೆ ಸ್ಥಳದಿಂದ ಪಲಾಯನ ಮಾಡಿದರು ಎಂದು ಸಂತ್ರಸ್ತ ವ್ಯಕ್ತಿಯೊಬ್ಬ ಹೇಳುವ ವಿಡಿಯೋವನ್ನೂ ಸುವೇಂದು ಅಧಿಕಾರಿ ಬಿಡುಗಡೆ ಮಾಡಿದ್ದಾರೆ.

ದೇಗುಲ ಕೆಡವಿದ್ದಾರೆ:

ಹಿಂದೂಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ರಾಜ್ಯಪ್ರೇರಿತ, ರಾಜ್ಯದಿಂದ ರಕ್ಷಿತ ಮತ್ತು ರಾಜ್ಯದಿಂದ ಪ್ರಚೋದಿತ ಹಿಂಸಾಚಾರ ನಡೆಯುತ್ತಿದೆ. ಹಿಂದೂಗಳು ಮನೆ-ಮಠಬಿಟ್ಟು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ದೇಗುಲಗಳಿಗೆ ಹಾನಿ ಮಾಡಲಾಗಿದೆ, ಮೂರ್ತಿಗಳನ್ನು ಕೆಡವಲಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲ ಆರೋಪಿಸಿದ್ದಾರೆ.