ಬೆಂಗಳೂರು ಟೆಕ್ಕಿ ಪಾಕ್‌ ಗಡೀಪಾರಿಗೆ ಸುಪ್ರೀಂ ತಡೆ

| N/A | Published : May 03 2025, 12:16 AM IST / Updated: May 03 2025, 05:05 AM IST

ಸಾರಾಂಶ

  ಗಡೀಪಾರು ಮಾಡಲು ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಬೆಂಗಳೂರಿನ ಟೆಕ್ಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್‌ 

ಶ್ರೀನಗರ: ಪಾಕಿಸ್ತಾನದ ಮೂಲದ ವ್ಯಕ್ತಿಗಳು ಎಂದು ಆರೋಪಿಸಿ ತಮ್ಮನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಬೆಂಗಳೂರಿನ ಟೆಕ್ಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್‌, ಕುಟುಂಬದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದೆ.

‘ಕಾಶ್ಮೀರದಲ್ಲಿ ನೆಲೆಸಿರುವ ನಿಮ್ಮ 6 ಜನರ ಕುಟುಂಬ 1997ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ ಮಾಡಿ ಇಲ್ಲಿ ವಾಸಿಸುತ್ತಿದೆ. ಹೀಗಾಗಿ ನಿಮ್ಮನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಶ್ರೀನಗರದ ವಿದೇಶಿ ನೋಂದಣಿ ಕಚೇರಿಯಿಂದ ನೋಟಿಸ್‌ ಬಂದಿತ್ತು. ಆದರೆ ನಾನು ಭಾರತೀಯ ಪ್ರಜೆ. ನನ್ನ ಬಳಿ ಆದಾರ್‌ ಕಾರ್ಡ್‌ ಮತ್ತು ಭಾರತೀಯ ಪಾಸ್ಪೋರ್ಟ್‌ ಇದೆ’ ಎಂದು ಬೆಂಗಳೂರಿನ ಟೆಕ್ಕಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಅರ್ಜಿದಾರರ ದಾಖಲೆ ಪರಿಶೀಲಿಸುವಂತೆ ಸೂಚಿಸಿದ್ದು, ತಕ್ಷಣಕ್ಕೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರ ಅಹಮದ್‌ ತಾರೇಖ್‌ ಭಟ್‌ ‘1987ರಲ್ಲಿ ನಮ್ಮ ತಂದೆ ಪಾಕಿಸ್ತಾನದ ಮುರ್ಷಿದಾಬಾದ್‌ನಿಂದ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಕಾಶ್ಮೀರ ಹೈಕೋರ್ಟ್‌ಗೆ ಪಾಸ್ಪೋರ್ಟ್‌ ನೀಡಿದ್ದರು. 3 ವರ್ಷ ಬಳಿಕ ನಮ್ಮ ಕುಟುಂಬ ಸದಸ್ಯರು ಭಾರತಕ್ಕೆ ಬಂದಿದ್ದರು. ಅವರು ಕೂಡಾ ಪಾಸ್ಪೋರ್ಟ್‌ ಕೋರ್ಟ್‌ಗೆ ಸಲ್ಲಿಸಿ ಭಾರತೀಯ ಪಾಸ್ಪೋರ್ಟ್‌, ಆಧಾರ್‌ ಪಡೆದುಕೊಂಡಿದ್ದರು. ನಾನು ಕಲ್ಲಿಕೋಟೆ ಐಐಎಂನಲ್ಲಿ ಎಂಬಿಎ ಮಾಡಿದ್ದೆ.’ ಎಂದು ಮಾಹಿತಿ ನೀಡಿದ್ದರು.