ಬೆಂಗಳೂರು ವಿದ್ಯಾರ್ಥಿ ನಿಪಾ ಸೋಂಕಿಂದ ಕೇರಳದಲ್ಲಿ ಸಾವು - ಜಾಂಡೀಸ್‌ ಎಂದು ತವರಿಗೆ ಹೋದವ ಬಲಿ

| Published : Sep 16 2024, 05:26 AM IST

nipah virus

ಸಾರಾಂಶ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಕ ನಿಪಾ ವೈರಾಣು ಸೋಂಕಿಗೆ ಬಲಿಯಾಗಿದ್ದಾನೆ

ಮಲಪ್ಪುರಂ (ಕೇರಳ): ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಕ ನಿಪಾ ವೈರಾಣು ಸೋಂಕಿಗೆ ಬಲಿಯಾಗಿದ್ದಾನೆ. ಈ ಘಟನೆ ಬೆನ್ನಲ್ಲೇ ಕೇರಳ ಸರ್ಕಾರ ಹೈಅಲರ್ಟ್‌ ಸಾರಿದ್ದು, ಸೋಂಕು ಹರಡದಂತೆ ಕಠಿಣ ಕ್ರಮ ಕೈಗೊಂಡಿದೆ. ವಿದ್ಯಾರ್ಥಿ ಬೆಂಗಳೂರಿನಿಂದ ಹೋದವನಾಗಿರುವುದರಿಂದ ಕರ್ನಾಟಕಕ್ಕೂ ಸೋಂಕಿನ ಆತಂಕ ಕಾಡತೊಡಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಾಂಡೂರ್‌ನವನಾದ 23 ವರ್ಷದ ವಿದ್ಯಾರ್ಥಿ ಜಾಂಡೀಸ್ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತವರಿಗೆ ಮರಳಿದ್ದ. ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಸೆ.9ರಂದು ಆತ ಕೊನೆಯುಸಿರೆಳೆದಿದ್ದ. ಕೋಳಿಕ್ಕೋಡ್‌ನಲ್ಲಿ ಈತನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನಿಪಾ ವೈರಾಣು ಸೋಂಕಿನ ಲಕ್ಷಣ ಕಂಡುಬಂದಿತ್ತು. ಹೀಗಾಗಿ ಉನ್ನತ ಪರಿಶೀಲನೆಗಾಗಿ ಆ ಮಾದರಿಯನ್ನು ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ವರದಿ ಬಂದಿದ್ದು, 23 ವರ್ಷದ ಯುವಕನಲ್ಲಿ ನಿಪಾ ಸೋಂಕು ಪತ್ತೆಯಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ತಿಳಿಸಿದ್ದಾರೆ.

26 ಪ್ರಾಥಮಿಕ ಸಂಪರ್ಕಿತರು:

ಮೃತ ವಿದ್ಯಾರ್ಥಿಯ ಜತೆ 26 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಕೇರಳದ ಆರೋಗ್ಯ ಇಲಾಖೆ ಆ ಎಲ್ಲರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಲಪ್ಪುರಂ ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಜು.21ರಂದು 14 ವರ್ಷದ ಬಾಲಕನೊಬ್ಬ ನಿಪಾ ಸೋಂಕಿಗೆ ಬಲಿಯಾಗಿದ್ದ. ಆನಂತರ ಕೇರಳ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ಹತ್ತಿಕ್ಕಿತ್ತು. ಆ.21ರಂದು ಜಿಲ್ಲೆಯನ್ನು ನಿಪಾ ಮುಕ್ತ ಎಂದು ಘೋಷಿಸಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸಾವು ಸಂಭವಿಸಿದೆ.

ದೇಶದಲ್ಲೇ ಮೊದಲ ಬಾರಿಗೆ 2018ರಲ್ಲಿ ಕೇರಳದಲ್ಲಿ ನಿಪಾ ಸೋಂಕು ಪತ್ತೆಯಾಗಿತ್ತು. ಆ ವರ್ಷ 18 ಮಂದಿ ಕೇರಳದಲ್ಲಿ ಸಾವಿಗೀಡಾಗಿದ್ದರು.

ಹೇಗೆ ಬರುತ್ತೆ?

ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್‌ ಇದು. ಸೋಂಕು ಹೊಂದಿದ ಬಾವಲಿ, ಹಂದಿ ಅಥವಾ ಹಣ್ಣು ಹುಳಗಳಿಂದ ಈ ರೋಗ ಮಾನವರ ಸಂಪರ್ಕಕ್ಕೆ ಬರಬಹುದು. ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಕಾಣಿಸಿಕೊಳ್ಳುತ್ತದೆ. 1998ರಲ್ಲಿ ಮೊದಲ ಬಾರಿಗೆ ಮಲೇಷ್ಯಾದಲ್ಲಿ ಕಂಡುಬಂದಿತ್ತು.

ಸೋಂಕಿನ ಲಕ್ಷಣ ಏನು?

ಅರಂಭಿಕವಾಗಿ ಜ್ವರ, ತಲೆನೋವು, ಮಾಂಸಖಂಡಗಳ ನೋವು ಕಾಣಿಸಿಕೊಳ್ಳುತ್ತದೆ. ನಂತರ ಉಸಿರಾಟ, ನರ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಈ ಸೋಂಕು ಮಾರಣಾಂತಿಕವಾಗಿದೆ.

ಚಿಕಿತ್ಸೆ ಏನು?

ಸದ್ಯಕ್ಕೆ ಯಾವುದೇ ನಿರ್ದಿಷ್ಟ ಔಷಧಿ, ಚಿಕಿತ್ಸೆ ಇಲ್ಲ. ಸಾಮಾನ್ಯ ಚಿಕಿತ್ಸೆ ಮಾತ್ರ ನೀಡಲಾಗುತ್ತದೆ.