ಸಾರಾಂಶ
‘ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಹಿಂದೂಗಳು ಯಾವುದೇ ಕಾರಣವಿಲ್ಲದೇ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಅವರು ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯಗಳನ್ನು ಎದುರಿಸಿದಂತೆ ಭಾರತ ಅವರ ಹಿತವನ್ನು ಕಾಪಾಡಬೇಕು’ ಎಂದು ಆರ್‌ಎಸ್‌ಎಸ್ ಮಖ್ಯಸ್ಥ ಮೋಹನ್ ಭಾಗವತ್ ಕರೆ ಕೊಟ್ಟಿದ್ದಾರೆ.
ನಾಗ್ಪುರ: ‘ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಹಿಂದೂಗಳು ಯಾವುದೇ ಕಾರಣವಿಲ್ಲದೇ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಅವರು ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯಗಳನ್ನು ಎದುರಿಸಿದಂತೆ ಭಾರತ ಅವರ ಹಿತವನ್ನು ಕಾಪಾಡಬೇಕು’ ಎಂದು ಆರ್‌ಎಸ್‌ಎಸ್ ಮಖ್ಯಸ್ಥ ಮೋಹನ್ ಭಾಗವತ್ ಗುರುವಾರ ಕರೆ ಕೊಟ್ಟಿದ್ದಾರೆ.
ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾತನಾಡಿದ ಅವರು, ಭಾರತವು ಇತರರಿಗೆ ಸಹಾಯ ಮಾಡುವ ಸಂಪ್ರದಾಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದಲ್ಲಿ ಉಂಟಾದ ಅಸ್ಥಿರತೆ ಮತ್ತು ಅರಾಜಕತೆಯ ನಡುವೆ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ಖಂಡಿಸುವ ಮೂಲಕ ಅವರ ಹಿತ ಕಾಯಬೇಕಿರುವುದು ಭಾರತದ ಜವಾಬ್ದಾರಿ ಎಂದರು.
ಯುವಕರು ವಿದೇಶಕ್ಕೆ ಹೋಗದಂಥ ಶಿಕ್ಷಣ ವ್ಯವಸ್ಥೆ ಸೃಷ್ಟಿ:
ದೆಹಲಿ: ದೇಶದ ಯುವಜನತೆ ಓದಿಗಾಗಿ ವಿದೇಶಕ್ಕೆ ಹೋಗುವ ಅಗತ್ಯವೇ ಇಲ್ಲದಂತಹ ಶಿಕ್ಷಣ ವ್ಯವಸ್ಥೆಯನ್ನು ಭಾರತದಲ್ಲಿ ನಿರ್ಮಿಸಲು ನಮ್ಮ ಸರ್ಕಾರ ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕೆಂಪುಕೋಟೆ ಮೇಲೆ ಭಾಷಣ ಮಾಡಿದ ಅವರು, ‘ಇಂದು ಮಧ್ಯಮ ವರ್ಗಕ್ಕೆ ಸೇರಿದ ಮಕ್ಕಳು ಕೂಡ ವೈದ್ಯಕೀಯ ಶಿಕ್ಷಣಕ್ಕಾಗಿ ಅನ್ಯ ದೇಶಗಳತ್ತ ಮುಖ ಮಾಡುತ್ತಿದ್ದು, ಅದಕ್ಕಾಗಿ ಕೋಟಿಗಟ್ಟಲೆ ವ್ಯಯಿಸುತ್ತಿದ್ದಾರೆ. ಪ್ರತಿ ವರ್ಷ 25,000 ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 75,000 ಹೊಸ ಸೀಟುಗಳನ್ನು ಸೃಷ್ಟಿಸಲಾಗುವುದು ವಿದೇಶಿ ವಿದ್ಯಾರ್ಥಿಗಳು ಕೂಡ ಓದಿಗಾಗಿ ನಮ್ಮಲ್ಲಿಗೆ ಬರುವಂತೆ ಮಾಡುತ್ತೇವೆ’ ಎಂದರು.ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 731ಕ್ಕೆ ಏರಿಕೆಯಾಗಿದ್ದು, ಇದು ಶೇ.88ರಷ್ಟು ಅಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಸಭೆಯಲ್ಲಿ ಮಾಹಿತಿ ನೀಡಿತ್ತು.
ಭಾರತ ವಿಶ್ವದ ಸಾವಯವ ಕಣಜ ಆಗಬೇಕು: ಮೋದಿ
ನವದೆಹಲಿ: ಭಾರತದಲ್ಲಿ ಕೃಷಿ ಕ್ಷೇತ್ರವನ್ನು ಪರಿವರ್ತಿಸುವ ಅಗತ್ಯವಿದೆ. ಭಾರತ ವಿಶ್ವದ ಸಾವಯವ ಕಣಜ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.ಕೆಂಪುಕೋಟೆಯಲ್ಲಿ 78ನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಮೋದಿ, ರೈತರ ಜೀವನವನ್ನು ಉತ್ತಮ ಗೊಳಿಸುವ ನಿಟ್ಟಿನಲ್ಲಿ ನೈಸರ್ಗಿಕ ಕೃಷಿ ಉತ್ತೇಜನಕ್ಕೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅಂತಹ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಬಜೆಟ್ ಹಂಚಿಕೆಯನ್ನು ಸಹ ಹೆಚ್ಚಿಸಲಾಗಿದೆ. ಕೃಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಭಾರತವನ್ನು ‘ವಿಶ್ವದ ಸಾವಯವ ಉತ್ಪನ್ನ ಕಣಜ’ ವನ್ನಾಗಿ ಮಾಡಬೇಕಿದೆ. ಆದ್ದರಿಂದ ಕೃಷಿ ವ್ಯವಸ್ಥೆಯನ್ನು ಪರಿವರ್ತಿಸುವ ಅಗತ್ಯವಿದೆ ಎಂದು ತಿಳಿಸಿದರು.
ಮಾಲಿನ್ಯ ತಡೆ ಗುರಿ ಮುಟ್ಟಿದ ಏಕೈಕ ಜಿ20 ದೇಶ ಭಾರತ: ಮೋದಿ
ನವದೆಹಲಿ: ಅವಧಿಗೂ ಮುಂಚಿತವಾಗಿ ಮಾಲಿನ್ಯ ತಡೆಯಲ್ಲಿ ಗುರಿ ಮುಟ್ಟಿದ ಏಕೈಕ ಜಿ20 ದೇಶ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಮೋದಿ, ‘ನನ್ನ ದೇಶದ ಜನರ ತಾಕತ್ತಿನ ಬಗ್ಗೆ ಜಗತ್ತಿಗೆ ಹೇಳಲು ಬಯಸುತ್ತೇನೆ. ಜಿ20ಯ ಅನ್ಯ ದೇಶಗಳಿಗೆ ಹೋಲಿಸಿದರೆ ಈ ನಿಟ್ಟಿನಲ್ಲಿ ಭಾರತ ಹೆಚ್ಚು ಪ್ರಯತ್ನ ಮಾಡಿದ್ದು, ಬೇರೆ ದೇಶಗಳು ಮಾಡದ್ದನ್ನು ನಾವು ಸಾಧಿಸಿದ್ದೇವೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ರೂಪಿಸಲಾದ ಮಾಲಿನ್ಯ ತಡೆಯನ್ನು ಅವಧಿಗೂ ಮೊದಲೇ ಪೂರೈಸಿದ್ದೇವೆ. ಇದು ಇಡೀ ವಿಶ್ವಕ್ಕೇ ಅಚ್ಚರಿ ಮೂಡಿಸಿದೆ’ ಎಂದರು.
‘ಸ್ವದೇಶಿ ವಿನ್ಯಾಸ, ವಿಶ್ವಕ್ಕೆ ವಿನ್ಯಾಸ’: ಡಿಸೈನಿಂಗ್ ಕ್ರಾಂತಿಗೆ ಮೋದಿ ಕರೆ
ನವದೆಹಲಿ: ‘ದೇಶದ ವಿನ್ಯಾಸ (ಡಿಸೈನಿಂಗ್) ಕ್ಷೇತ್ರ ಜಾಗತಿಕವಾಗಿ ಅಭಿವೃದ್ಧಿ ಸಾಧಿಸಬೇಕು. ಸ್ವದೇಶಿ ವಿನ್ಯಾಸ, ವಿಶ್ವಕ್ಕೆ ವಿನ್ಯಾಸ ಎನ್ನುವ ಪರಿಕಲ್ಪನೆಗೆ ಆದ್ಯತೆಯನ್ನು ನೀಡಿದರೆ ದೇಶಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಅಸಾಧಾರಣ ಪ್ರಗತಿಯನ್ನು ಸಾಧಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ, ‘ಡಿಸೈನಿಂಗ್ ಕ್ಷೇತ್ರದಲ್ಲಿ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಇದರಿಂದ ಜಗತ್ತಿಗೆ ಅಪಾರ ಕೊಡುಗೆ ನೀಡಬಹುದು. ‘ಸ್ವದೇಶಿ ವಿನ್ಯಾಸ, ವಿಶ್ವಕ್ಕೆ ವಿನ್ಯಾಸ’ ಎನ್ನುವ ಪರಿಕಲ್ಪನೆಯಲ್ಲಿ ಕೆಲಸ ಮಾಡಬೇಕು. ಭಾರತ ಗುಣಮಟ್ಟಕ್ಕೆ ಹೆಸರುವಾಸಿ. ವಿನ್ಯಾಸ ಕೌಶಲ್ಯಗಳಿಗೆ ಆದ್ಯತೆ ನೀಡಿದರೆ, ಈ ಕ್ಷೇತ್ರದಲ್ಲಿ ಭಾರತದ ಗುಣಮಟ್ಟ ವಿಶ್ವದ ಗುಣಮಟ್ಟವಾಗಲಿದೆ’ ಎಂದರು.‘ಜಾಗತಿಕ ಉತ್ಪಾದನೆಯನ್ನು ಮೇಕ್ ಇನ್ ಇಂಡಿಯಾ ಮಾಡಲು ಇದೊಂದು ಸುವರ್ಣವಕಾಶ’ ಎಂದ ಪ್ರಧಾನಿ, ‘ಸ್ಕಿಲ್ ಇಂಡಿಯಾ ಕಾರ್ಯಕ್ರಮ, ವೋಕಲ್ ಫಾರ್ ಲೋಕಲ್ ಕಲ್ಪನೆ ಆರ್ಥಿಕತೆಗೆ ಬಲ ತುಂಬಲಿದೆ’ ಎಂದರು.