ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರ ಕಾರ್ಮಿಕ, ರೈತ, ಆರ್ಥಿಕತೆ, ರಾಷ್ಟ್ರವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ 10 ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‌ಗೆ ಕರೆ ನೀಡಿವೆ.
ಈ ಬಂದ್‌ನಿಂದ ಬ್ಯಾಂಕ್ ಮತ್ತು ಆರ್ಥಿಕ ಸೇವೆಗಳು, ಅಂಚೆ ಸೇವೆ, ಕಲ್ಲಿದ್ದಲು ಗಣಿಗಾರಿಕೆ ಮತ್ತು ಕೈಗಾರಿಕಾ ಘಟಕಗಳ ಸೇವೆ, ಸರ್ಕಾರಿ ಉದ್ದಿಮೆಗಳ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.
ಆದರೆ ಸರ್ಕಾರಿ ಸಾರಿಗೆ ವ್ಯವಸ್ಥೆ, ಶಾಲೆ-ಕಾಲೇಜು ಇತ್ಯಾದಿಗಳು ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮುಷ್ಕರಕ್ಕೆ ಕಾರಣವೇನು?:
ತಮ್ಮ 17 ಬೇಡಿಕೆಗಳ ಪಟ್ಟಿಯನ್ನು ಕಳೆದ ವರ್ಷವೇ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ನೀಡಿದ್ದರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅಂತೆಯೇ, ಸರ್ಕಾರದ ಹೊಸ ಕಾರ್ಮಿಕ ನೀತಿಗಳು ಮುಷ್ಕರ ನಡೆಸುವ ಹಕ್ಕನ್ನು ಮೊಟಕುಗೊಳಿಸಿ, ದುಡಿತದ ಸಮಯವನ್ನು ಹೆಚ್ಚಿಸುವುದರ ಜತೆಗೆ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸಿವೆ ಎಂಬುದು ಬಂದ್‌ಗೆ ಕರೆ ನೀಡಿರುವವರ ಆರೋಪ.
ಜತೆಗೆ, ವಲಸೆ ಕಾರ್ಮಿಕರ ಹಕ್ಕು ಕಸಿಯುವಿಕೆ, ಕಳೆದ 10 ವರ್ಷದಲ್ಲಿ ಕಾರ್ಮಿಕದ ಸಮ್ಮೇಳನ ನಡೆಸದೇ ಇರುವುದು, ಯುವಕರ ನೇಮಕದ ಬದಲು ನಿವೃತ್ತರ ಮರುನೇಮಕದ ಬಗ್ಗೆಯೂ ಅಸಮಾಧಾನವಿದೆ.