‘ದಿಲ್ಲಿ ಚಲೋ’ ಹೋರಾಟ ದೇಶವಿರೋಧಿಗಳಿಂದ ಹೈಜಾಕ್‌?

| Published : Feb 18 2024, 01:36 AM IST / Updated: Feb 18 2024, 08:09 AM IST

ಸಾರಾಂಶ

ಭದ್ರತಾ ಪಡೆಗಳ ಮೇಲೆ ಪ್ರತಿಭಟಕಾರರಿಂದ ಕಲ್ಲು ತೂರಾಟ ನಡೆದಿದ್ದು, ಪಡೆಗಳತ್ತ ಕತ್ತಿ ಝಳಪಿಸಿ, ಸಡ್ಡು ಹೊಡೆದ ನಿಹಾಂಗ್‌ ಸಿಖ್‌ ಸಮುದಾಯ ತಿರುಗೇಟು ನೀಡಿದೆ. ಈ ನಡುವೆ ಪ್ರತಿಭಟನಾಕಾರರ ಟ್ರಕ್‌ನಲ್ಲಿ ಖಲಿಸ್ತಾನಿ ಉಗ್ರ ಭಿಂದ್ರನ್‌ ಚಿತ್ರವಿರುವುದು ಕಂಡುಬಂದಿದೆ.

ಚಂಡೀಗಢ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್‌ ಮತ್ತು ಹರ್ಯಾಣ ರೈತರು ಕೈಗೊಂಡಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಹರ್ಯಾಣದ ಶಂಭು ಗಡಿ ಸೇರಿದಂತೆ ಹಲವೆಡೆ ಹಿಂಸಾಚಾರಕ್ಕೆ ತಿರುಗಿದ್ದು, ಕಿಡಿಗೇಡಿಗಳು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. 

ಅಲ್ಲದೇ ಇತ್ತೀಚೆಗೆ ವೈರಲ್‌ ಆದ ವಿಡಿಯೋವೊಂದರಲ್ಲಿ, ರೈತರ ಪ್ರತಿಭಟನೆಯಲ್ಲಿ ನಿಹಾಂಗ್ ಸಿಖ್ಖರು ಭದ್ರತಾ ಪಡೆಗಳತ್ತ ಕತ್ತಿ ಬೀಸುತ್ತಿರುವ ಭಯಾನಕ ದೃಶ್ಯ ಕಂಡು ಬಂದಿದೆ. ಅಲ್ಲದೇ ಆತ ಪ್ರಚೋದನಕಾರಿಯಾಗಿ ತೊಡೆ ತಟ್ಟಿ ಸಡ್ಡು ಹೊಡೆದಿದ್ದಾನೆ.

ಇದೇ ವೇಳೆ ಕೆಲವರು ಬಿಲ್ಲು ಬಾಣ ಹಿಡಿದು ತಿರುಗಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ಪ್ರತಿಭಟನಾಕಾರರ ಟ್ರಕ್‌ನಲ್ಲಿ ಖಲಿಸ್ತಾನಿ ಉಗ್ರ ಭಿಂದ್ರನ್‌ವಾಲೆ ಭಾವಚಿತ್ರವಿರುವುದೂ ಕಂಡು ಬಂದಿದೆ. 

ಹೀಗಾಗಿ ರೈತರ ಹೋರಾಟವನ್ನು ಕೆಲ ದುಷ್ಕರ್ಮಿಗಳು ದೇಶ ವಿರೋಧಿ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 2021ರಲ್ಲಿಯೂ ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇದೇ ರೀತಿ ಹಿಂಸಾಚಾರ ನಡೆದಿತ್ತು. 

ದೆಹಲಿ ಪ್ರವೇಶಿಸಲು ಹೊರಟಿದ್ದ ರೈತರನ್ನು ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ತಡೆಹಿಡಿಯಲಾಗಿದೆ. ಸತತ ಐದನೇ ದಿನವಾದ ಶನಿವಾರವೂ ರೈತರ ಪ್ರತಿಭಟನೆ ಮುಂದುವರೆಯಿತು. 

ಈ ವೇಳೆ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಕೆಡವಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಘಟನೆಗಳಲ್ಲಿ ಅನೇಕ ಭದ್ರತಾ ಪಡೆಗಳು ಹಾಗೂ ಪತ್ರಕರ್ತರೂ ಗಾಯಗೊಂಡಿದ್ದಾರೆ.