ಸಾರಾಂಶ
ಹಾಥ್ರಸ್: 121 ಭಕ್ತರನ್ನು ಬಲಿ ಪಡೆದ ಹಾಥ್ರಸ್ ಸತ್ಸಂಗ ದುರ್ಘಟನೆ ಬೆನ್ನಲ್ಲೇ ಐಷಾರಾಮಿ ಭೋಲೇ ಬಾಬಾನ ಆಸ್ತಿಯ ಮೇಲೆ ಪೊಲೀಸ್ ಅಧಿಕಾರಿಗಳು ಕಣ್ಣಿಟ್ಟಿದ್ದು ತನಿಖೆ ಆರಂಭಿಸಿದ್ದಾರೆ.
ತಾನು ಎಂದಿಗೂ ದೇಣಿಗೆಯನ್ನೇ ಸ್ವೀಕರಿಸುವುದಿಲ್ಲ ಎಂದು ಹೇಳುವ ಬಾಬಾನ ಬಳಿ ಒಟ್ಟು 24 ಆಶ್ರಮಗಳಿವೆ. ಹತ್ತಾರು ಐಷಾರಾಮಿ ಕಾರುಗಳು, ದೊಡ್ಡ ಬೆಂಗಾವಲು ಪಡೆ, ಅವರ ವಾಹನಗಳ ದಂಡೇ ಇದೆ.
ಹೀಗಾಗಿ ಈತನಿಗೆ ರಾಜಕೀಯ ಪಕ್ಷಗಳಿಂದ ದೇಣಿಗೆ ಹರಿದು ಬಂದಿರುವ ಶಂಕೆ ಇದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.ಈ ಪೈಕಿ ಮೈನ್‌ಪುರಿಯಲ್ಲಿ 13 ಎಕರೆ ಪ್ರದೇಶದ ದೊಡ್ಡ ಆಶ್ರಮ ಇದೆ. ಇಲ್ಲಿ ಬಾಬಾ ಮತ್ತು ಅವರ ಪತ್ನಿಗೆ 6 ಐಷಾರಾಮಿ ಕೊಠಡಿಗಳಿವೆ. ಅನುಮತಿ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ಇಲ್ಲದಂಥ ಭದ್ರತೆ ಇಲ್ಲಿದೆ.
ಇದರ ಹೊರತಾಗಿ ಉತ್ತರಪ್ರದೇಶದ ಹಲವು ಕಡೆ ಇನ್ನೂ 23 ಆಶ್ರಮ ಇದೆ. ಬಾಬಾ ಹೋದಲ್ಲೆಲ್ಲ 20 ಬೆಂಗಾವಲು ವಾಹನ ಆತನ ಹಿಂದೆ ಮುಂದೆ ಸಂಚರಿಸುತ್ತವೆ ಹಾಗೂ ಕಪ್ಪು ಉಡುಪಿನಲ್ಲಿ 15 ಕಮಾಂಡೋಗಳು ಭಧ್ರತೆಗೆ ಇರುತ್ತಾರೆ. ಈತನ ಆಸ್ತಿ ಮೌಲ್ಯ ಏನಿಲ್ಲವೆಂದರೂ 100 ಕೋಟಿ ರು. ದಾಟುತ್ತದೆ. ದೇಣಿಗೆಯೇ ಪಡೆಯದ ಬಾಬಾನ ಬಳಿ ಇಷ್ಟು ಆಸ್ತಿ ಬಂದಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಅಧಿಕಾರಿಗಳಲ್ಲಿ ಮೂಡಿದೆ.
ಹೀಗಾಗಿ ಇತ್ತೀಚಿನ ಸತ್ಸಂಗ ದುರ್ಘಟನೆ ಬಳಿಕ ಆಶ್ರಮದ ಮೇಲೆ ನಡೆಸಿದ ದಾಳಿ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಅವುಗಳ ತನಿಖೆ ಆರಂಭಿಸಿದ್ದಾರೆ. ಈ ನಡುವೆ ಆಶ್ರಮದ ಮೂಲಗಳ ಪ್ರಕಾರ, ಅಲ್ಲಿ 80ಕ್ಕೂ ಹೆಚ್ಚು ಜನರು ಯಾವುದೇ ವೇತನ ಇಲ್ಲದೆಯೇ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಗ್ರಾಮಸ್ಥನೊಬ್ಬ ಮಾತನಾಡಿ, ‘ಆಶ್ರಮದಿಂದಲೇ ಸ್ಥಳೀಯ ಪೊಲೀಸರಿಗೆ ನಿತ್ಯವೂ ಆಹಾರ ಪೂರೈಕೆ ಮಾಡಲಾಗುತ್ತದೆ. ಈ ಮೂಲಕ ಒಂದು ವೇಳೇ ಆಶ್ರಮದಲ್ಲಿ ಏನಾದರೂ ಆದರೆ ಪೊಲೀಸರು ತಮ್ಮ ಪರವಾಗಿಯೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದ.
ಇನ್ನು ಕೆಲವು ಗ್ರಾಮಸ್ಥರು, ಆಶ್ರಮ ಎದುರಿಗೇ ಇರುವ ನಮ್ಮ ಹೊಲಗಳಿಗೆ ಹೋಗಲೂ ಆಶ್ರಮದ ಸಿಬ್ಬಂದಿ ತಡೆಯೊಡ್ಡಿ ಬೆದರಿಕೆ ಹಾಕುತ್ತಾರೆ ಎಂದು ದೂರಿದ್ದಾರೆ.ಭೋಲೇ ಬಾಬಾನಿಗೆ ಕೇವಲ ಜನಸಾಮಾನ್ಯರು ಮಾತ್ರವಲ್ಲ, ಹಿರಿಯ ಅಧಿಕಾರಿಗಳು ಕೂಡಾ ಭಕ್ತರಾಗಿದ್ದಾರೆ. ಹೀಗಾಗಿಯೇ ಬಾಬಾಗೆ ಯಾವುದೇ ಕೆಲಸದಲ್ಲೂ ಯಾವುದೇ ಅಡ್ಡಿಯಾಗದು ಎಂದು ಕೆಲ ಗ್ರಾಮಸ್ಥರು ಹೇಳಿದ್ದಾರೆ.
==
ಕಾಲ್ತುಳಿತದ ಕಾರಣಕರ್ತರ ಸುಮ್ಮನೇ ಬಿಡಬೇಡಿ: ಬಾಬಾ
ನವದೆಹಲಿ: ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಸತ್ಸಂಗದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ ಬಳಿಕ ನಾಪತ್ತೆಯಾಗಿರುವ ಸ್ವಯಂಘೋಷಿತ ದೇವಮಾನವ ಭೋಲೇ ಬಾಬಾ ಇದೀಗ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ.ಅದರಲ್ಲಿ ‘ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನಮಗೆ ನೀಡಲಿ. ಸರ್ಕಾರ ಮತ್ತು ಆಡಳಿತದಲ್ಲಿ ವಿಶ್ವಾಸ ಇಡಿ. ಈ ದುರ್ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ವಕೀಲ ಎ.ಪಿ.ಸಿಂಗ್ ಮೂಲಕ, ನೊಂದವರ ಸಂಕಷ್ಟಕ್ಕೆ ನೆರವಾಗಿ ಎಂದು ಈಗಾಗಲೇ ನನ್ನ ಆಪ್ತರಿಗೆ ಸೂಚಿಸಿದ್ದೇನೆ’ ಎಂದಿದ್ದಾರೆ.
==
ಹಾಥ್ರಸ್ ಕಾಲ್ತುಳಿತ: ಬಾಬಾ ವಿರುದ್ಧ ಮೊದಲ ದಾವೆಪಟನಾ: ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ 121 ಭಕ್ತರ ಬಲಿಪಡೆದ ಸತ್ಸಂಗ ಕಾರ್ಯಕ್ರಮದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ವಿವಾದಿತ ಧರ್ಮಗುರು ಭೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಸಿಂಗ್ ವಿರುದ್ಧ ಪಟನಾ ಕೊರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ.ಬಾಬಾನೇ ಘಟನೆಗೆ ಕಾರಣ. ಆತನ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ಪಟನಾ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ಬಾಬಾ ಆಪ್ತನಿಗೆ ರಾಜಕೀಯ ನಂಟು:ಈ ನಡುವೆ ಕಾಲ್ತುಳಿತ ಸಂಭವಿಸಿದ ಸತ್ಸಂಗ ಕಾರ್ಯಕ್ರಮದ ಸಂಚಾಲಕ ದೇವಪ್ರಕಾಶ್ ಮಧುಕರ್‌ನ ಬಂಧನದ ಬೆನ್ನಲ್ಲೇ ಆತನ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆಗೆ ಪೊಲೀಸರು ನಿರ್ಧರಿಸಿದ್ದಾರೆ. ಬಾಬಾನ ಪರ ಆತನೇ ಹಣ ಸಂಗ್ರಹಿಸುತ್ತಿದ್ದ ಎಂಬ ಗುಮಾನಿ ಇದೆ.
ಈ ನಡುವೆ ಇತ್ತೀಚೆಗೆ ಆತನನ್ನು ಕೆಲವು ರಾಜಕೀಯ ಪಕ್ಷಗಳು ಸಂಪರ್ಕಿಸಿದ್ದವು ಎಂದು ಪೊಲೀಸರು ಹೇಳಿದ್ದಾರೆ.ಹಾಥ್ರಸ್‌ಗೆ ನ್ಯಾಯಾಂಗ ತನಿಖಾ ತಂಡ:
ಶನಿವಾರ ಹಾಥ್ರಸ್ ಕಾಲ್ತುಳಿತ ಘಟನಾ ಸ್ಥಳಕ್ಕೆ ತ್ರಿಸದಸ್ಯ ನ್ಯಾಯಾಂಗ ತನಿಖಾ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿತು.