ಭಾರತಕ್ಕೆ ಬೇಕಿದ್ದ ಖಲಿಸ್ತಾನಿ ಉಗ್ರ ಪಾಕ್‌ನಲ್ಲಿ ಸಾವು

| Published : Jul 07 2024, 01:27 AM IST / Updated: Jul 07 2024, 05:21 AM IST

ಸಾರಾಂಶ

1981ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ಅಪಹರಿಸಿದ್ದ ತಂಡದ ನಾಯಕ, ದಾಲ್‌ ಖಾಲ್ಸಾ ಖಲಿಸ್ತಾನಿ ಉಗ್ರ ಸಂಘಟನೆಯ ನಾಯಕ ಗಜಿಂದರ್‌ ಸಿಂಗ್‌ (73) ಹೃದಯಾಘಾತದಿಂದ ಶುಕ್ರವಾರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಅಮೃತಸರ: 1981ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ಅಪಹರಿಸಿದ್ದ ತಂಡದ ನಾಯಕ, ದಾಲ್‌ ಖಾಲ್ಸಾ ಖಲಿಸ್ತಾನಿ ಉಗ್ರ ಸಂಘಟನೆಯ ನಾಯಕ ಗಜಿಂದರ್‌ ಸಿಂಗ್‌ (73) ಹೃದಯಾಘಾತದಿಂದ ಶುಕ್ರವಾರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ವಿಮಾನ ಅಪಹರಣದ ಪ್ರಕರಣದಲ್ಲಿ 14 ವರ್ಷ ಪಾಕಿಸ್ತಾನದ ಜೈಲಲ್ಲೇ ಶಿಕ್ಷೆ ಅನುಭವಿಸಿದ್ದ ಗಜಿಂದರ್‌ ಸಿಂಗ್‌ ಬಳಿಕ ಪಾಕಿಸ್ತಾನದಲ್ಲಿದ್ದುಕೊಂಡೇ ಭಾರತ ವಿರೋಧಿ ದೃಷ್ಕೃತ್ಯ ಎಸಗುತ್ತಿದ್ದ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನಾನ್ಕಾನಾ ಸಾಹೀಬ್‌ನಲ್ಲಿ ವಾಸವಿದ್ದ ಈತ ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ತುತ್ತಾಗಿದ್ದ. 

ಈ ಹಿನ್ನೆಲೆಯಲ್ಲಿ ಆತನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಿಂಗ್‌ ಶುಕ್ರವಾರ ಸಾವನ್ನಪ್ಪಿದ್ದಾನೆ.ಕಳೆದ ಮೇ ತಿಂಗಳಲ್ಲಿ ಖಲಿಸ್ತಾನಿ ಕಮಾಂಡೋ ಫೋರ್ಸ್‌ನ ನಾಯಕ ಪರಮ್‌ಜಿತ್‌ನನ್ನು ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಗಜಿಂದರ್‌ನನ್ನು ಪಾಕಿಸ್ತಾನ ಸರ್ಕಾರ, ಸರ್ಕಾರಿ ಅತಿಥಿ ಗೃಹದಲ್ಲಿ ಇಟ್ಟು ರಕ್ಷಣೆ ನೀಡಿತ್ತು.

2001ರಲ್ಲಿ ಭಾರತದ ಸಂಸತ್‌ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತದ ಗೃಹ ಸಚಿವಾಲಯವು ಪ್ರಕರಣ ಸಂಬಂಧ 20 ಉಗ್ರರನ್ನು ಗಡಿಪಾರು ಮಾಡುವಂತೆ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿತ್ತು. ಈ ಪೈಕಿ ಗಜಿಂದರ್‌ ಕೂಡಾ ಒಬ್ಬನಾಗಿದ್ದ.1971ರಲ್ಲಿ ಪಂಜಾಬ್‌ನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಗಿಯಾಗಿದ್ದ ರ್‍ಯಾಲಿಯೊಂದರ ವೇಳೆ ಈತ ಪ್ರತ್ಯೇಕ ಸಿಖ್‌ ದೇಶದ ಬೇಡಿಕೆ ಕುರಿತ ಕರಪತ್ರ ಎಸೆದಿದ್ದ. ಪ್ರತ್ಯೇಕ ಸಿಖ್‌ ದೇಶದ ಬಲವಾದ ಪ್ರತಿಪಾದಕನಾಗಿದ್ದ ಈತ 9 ಪುಸ್ತಕ ಕೂಡಾ ಬರೆದಿದ್ದಾನೆ.