ಸಾರಾಂಶ
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಸೀಟು ಹಂಚಿಕೆ ಸಂಬಂಧ ಮಿತ್ರಪಕ್ಷಗಳಲ್ಲಿ ಉಂಟಾಗಿದ್ದ ಅಸಮಾಧಾನ ಬಗೆಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಯಶಸ್ವಿಯಾಗಿದೆ
ನವದೆಹಲಿ : ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಸೀಟು ಹಂಚಿಕೆ ಸಂಬಂಧ ಮಿತ್ರಪಕ್ಷಗಳಲ್ಲಿ ಉಂಟಾಗಿದ್ದ ಅಸಮಾಧಾನ ಬಗೆಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಯಶಸ್ವಿಯಾಗಿದೆ. ಅದರನ್ವಯ ಕೂಟದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಉಳಿದಂತೆ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ 29, ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕಮೋರ್ಚಾ ಮತ್ತು ಕೇಂದ್ರ ಸಚಿವ ಜೀತನ್ ರಾಂ ಮಾಂಝಿ ಅವರ ಹಿಂದುಸ್ತಾನ್ ಅವಾಮ್ ಮೋರ್ಚಾ ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.ಕೇಂದ್ರ ಸಚಿವ, ಬಿಹಾರ ಎನ್‌ಡಿಎ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ಸೀಟು ಹಂಚಿಕೆ ಘೋಷಿಸಿ ಮಾತನಾಡಿ, ‘ಎನ್‌ಡಿಎ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ನಾಯಕರು, ಕಾರ್ಯಕರ್ತರು ಸಂತೋಷದಿಂದ ಸ್ವಾಗತಿಸಿದ್ದಾರೆ. ಬಿಹಾರವು ಮತ್ತೊಮ್ಮೆ ಎನ್‌ಡಿಎ ಸರ್ಕಾರವನ್ನು ಸ್ವಾಗತಿಸಲು ಸಿದ್ಧವಾಗಿದೆ’ ಎಂದು ಹೇಳಿದರು.
ಈ ಮೊದಲು 35 ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದ ಚಿರಾಗ್ ಪಾಸ್ವಾನ್‌ರನ್ನು 29 ಸ್ಥಾನಗಳಿಗೆ, 15 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಮಾಂಝಿ ಅವರನ್ನು 6 ಸ್ಥಾನಕ್ಕೆ ಒಪ್ಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದರೊಂದಿಗೆ ಮಹತ್ವದ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ವಿಪಕ್ಷ ಇಂಡಿಯಾ ಮೈತ್ರಿಕೂಟಕ್ಕಿಂತ ಎನ್‌ಡಿಎ ಮೈತ್ರಿಕೂಟ ಒಂದು ಹೆಜ್ಜೆ ಮುನ್ನಡೆ ಸಾಧಿಸಿದೆ.ಜೆಡಿಯು, ಬಿಜೆಪಿಗೆ ಕಡಿಮೆ ಸೀಟು:
2020ರಲ್ಲಿ ಬಿಜೆಪಿ 110 ಮತ್ತು ಅಂದು ವಿಪಕ್ಷ ಇಂಡಿಯಾ ಕೂಟದಲ್ಲಿದ್ದ ಜೆಡಿಯು 115 ಸೀಟುಗಳಲ್ಲಿ ಸ್ಪರ್ಧಿಸಿದ್ದವು. ಆಗ ಎಲ್‌ಜೆಪಿ ಮತ್ತು ಎಚ್‌ಎಎಂ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು.