ಸಾರಾಂಶ
ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ. ಮಂಡನೆಯ ಬಳಿಕ ಉಭಯ ಸದನಗಳ ಜಂಟಿ ಸಮಿತಿ ಪರಾಮರ್ಶೆಗೆ ಈ ವಿಧೇಯಕವನ್ನು ಹಸ್ತಾಂತರಿಸುವ ನಿರೀಕ್ಷೆ ಇದೆ.
ನವದೆಹಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ. ಮಂಡನೆಯ ಬಳಿಕ ಉಭಯ ಸದನಗಳ ಜಂಟಿ ಸಮಿತಿ ಪರಾಮರ್ಶೆಗೆ ಈ ವಿಧೇಯಕವನ್ನು ಹಸ್ತಾಂತರಿಸುವ ನಿರೀಕ್ಷೆ ಇದೆ.
‘ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಮಸೂದೆ ಮಂಡಿಸಲಿದ್ದಾರೆ. ಬಳಿಕ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ, ‘ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಇದನ್ನು ವಹಿಸಿ’ ಎಂದು ಕೋರಲಿದ್ದಾರೆ. ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಅನುಪಾತದ ಆಧಾರದ ಮೇಲೆ ಜಂಟಿ ಸಮಿತಿಯನ್ನು ರಚಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮುನ್ನ ಸೋಮವಾರ ವಿಧೇಯಕ ಮಂಡಿಸಲು ಉದ್ದೇಶಿಸಲಾಗಿತ್ತು. ಆದರೆ ಪೂರಕ ಅಂದಾಜುಗಳು ಅಂಗೀಕಾರ ಆಗಬೇಕಿದ್ದ ಕಾರಣ ಮಂಡನೆಯನ್ನು ಮುಂದೂಡಲಾಗಿತ್ತು. ಈ ನಡುವೆ, ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಅನುಪಸ್ಥಿತರಿದ್ದ ಕಾರಣಕ್ಕೂ ಸೋಮವಾರ ಮಸೂದೆ ಮಂಡನೆ ಮಾಡಿರಲಿಲ್ಲ ಎಂದು ಮೂಲಗಳು ಹೇಳಿವೆ.