2021ರಲ್ಲಿ ಜಗನ್ಮೋಹನ ರೆಡ್ಡಿ ಭೇಟಿ ಆಗಿದ್ದ ಉದ್ಯಮಿ ಗೌತಮ್‌ ಅದಾನಿ : ಅಮೆರಿಕ ಆರೋಪ

| Published : Nov 23 2024, 12:33 AM IST / Updated: Nov 23 2024, 04:39 AM IST

ಸಾರಾಂಶ

ಉದ್ಯಮಿ ಗೌತಮ್‌ ಅದಾನಿ ಎಸಗಿದ್ದಾರೆ ಎನ್ನಲಾದ ವಿದ್ಯುತ್‌ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ), ಆಂಧ್ರಪ್ರದೇಶ ಅಂದಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ವಿರುದ್ಧವೂ ಆರೋಪಿಸಿದೆ.

ಅಮರಾವತಿ/ಭುವನೇಶ್ವರ: ಉದ್ಯಮಿ ಗೌತಮ್‌ ಅದಾನಿ ಎಸಗಿದ್ದಾರೆ ಎನ್ನಲಾದ ವಿದ್ಯುತ್‌ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ), ಆಂಧ್ರಪ್ರದೇಶ ಅಂದಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ವಿರುದ್ಧವೂ ಆರೋಪಿಸಿದೆ. ವಿದ್ಯುತ್‌ ಖರೀದಿಗೆ ಆಂಧ್ರ ನಿರಾಸಕ್ತಿ ತಾಳುತ್ತಿದ್ದರಿಂದ ಜಗನ್‌ರನ್ನು 2021ರಲ್ಲಿ ಅದಾನಿ ಭೇಟಿ ಮಾಟಿದ್ದರು ಎಂದು ಅದು ಅಮೆರಿಕ ನ್ಯಾಯಾಲಯಕ್ಕೆ ತಿಳಿಸಿದೆ.ಇನ್ನೊಂದೆಡೆ ಅಮೆರಿಕ ಕಾನೂನು ಇಲಾಖೆಯು, ಅದಾನಿ ಕಂಪನಿಯಿಂದ ಅನಾಮಧೇಯ ಆಂಧ್ರ ಸರ್ಕಾರದ ಅಧಿಕಾರಿಗೆ 1750 ಕೋಟಿ ರು. ಲಂಚದ ಆಫರ್ ಮಾಡಲಾಗುತ್ತು ಎಂದಿದೆ.

ಅಧ್ಯಯನ ಮಾಡುತ್ತೇವೆ- ನಾಯ್ಡು:

ಆದರೆ ಈ ಆರೋಪಗಳು ಸುಳ್ಳು ಎಂದು ಜಗನ್‌ರ ವೈಎಸ್ಸಾರ್‌ ಕಾಂಗ್ರೆಸ್ ಪಕ್ಷ ನಿರಾಕರಿಸಿದೆ. ಆದರೆ ಅಮೆರಿಕ ಮಾಡಿದ ಆರೋಪಗಳನ್ನು ಅಧ್ಯಯನ ನಡೆಸುತ್ತೇವೆ ಎಂದು ಆಂಧ್ರ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆರೋಪ ಸುಳ್ಳು- ಬಿಜೆಡಿ:

ಇನ್ನು ಒಡಿಶಾದಲ್ಲಿ ಬಿಜೆಡಿ ಆಡಳಿತದ ವೇಳೆ ಅದಾನಿ ಅವರು ಒಡಿಶಾ ಅಧಿಕಾರಿಗಳಿಗೆ ಲಂಚ ಪಾವತಿಸಿದ್ದರು ಎಂಬ ಅಮೆರಿಕ ಆರೋಪಕ್ಕೆ ಬಿಜೆಡಿ ಪ್ರತಿಕ್ರಿಯಿಸಿದ್ದು, ‘ಇದು ಆಧಾರರಹಿತ ಆರೋಪ’ ಎಂದಿದೆ.

ಆಂಧ್ರವನ್ನು ‘ಅದಾನಿ ಪ್ರದೇಶ’ ಮಾಡಿದ್ದ ಜಗನ್‌: ಶರ್ಮಿಳಾ ಆರೋಪ

ಹೈದರಾಬಾದ್‌: ವೈಎಸ್‌ಆರ್‌ ಕಾಂಗ್ರೆಸ್‌ ಅವಧಿಯಲ್ಲಿ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಆಂಧ್ರವನ್ನು ಉದ್ಯಮಿ ಗೌತಮ್‌ ಅದಾನಿಗೆ ಬ್ಲ್ಯಾಂಕ್‌ ಚೆಕ್‌ ರೀತಿ ನೀಡಿ ‘ಅದಾನಿ ಪ್ರದೇಶ’ ಮಾಡಲು ಅನುವು ಮಾಡಿಕೊಟ್ಟಿದ್ದರು ಎಂದು ಜಗನ್‌ ಸಹೋದರಿ, ಎಪಿಸಿಸಿ ಅಧ್ಯಕ್ಷೆ ವೈ.ಎಸ್‌. ಶರ್ಮಿಳಾ ಆರೋಪಿಸಿದ್ದಾರೆ.ಅದಾನಿ ವಿರುದ್ಧದ ಸೌರಶಕ್ತಿ ಹಗರಣದ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರ್ಮಿಳಾ, ‘1,750 ಕೋಟಿ ರು.ಗಾಗಿ ಜಗನ್‌ ರಾಜ್ಯದ ಜನರ ಭಾವನೆಗಳನ್ನು ಅಡವಿಟ್ಟಿದ್ದರು. ಇದರಿಂದಾಗಿ ವೈಎಸ್‌ಆರ್‌ ಪರಿವಾರ ಹಾಗೂ ದಕ್ಷಿಣದ ರಾಜ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಅವಮಾನವಾಗಿದೆ’ ಎಂದರು.

ವೈಎಸ್‌ಆರ್‌ಸಿಪಿ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳು , ವಿದ್ಯುತ್‌ ಖರೀದಿಗಾಗಿ ಅದಾನಿ ಸಮೂಹದಿಂದ ಲಂಚ ಪಡೆದಿದ್ದರು ಎಂಬ ಆರೋಪದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.