ಸಾರಾಂಶ
ನವದೆಹಲಿ: ಸಂವಿಧಾನದ ಮೂಲಚೌಕಟ್ಟನ್ನು ಉಲ್ಲಂಘಿಸುವ ಕಾಯ್ದೆ ರೂಪಿಸಬೇಡಿ ಎಂದು ಹೇಳಿದ ಸುಪ್ರೀಂಕೋರ್ಟ್‌ನ ಅನ್ನು ಉದ್ದೇಶಪೂರ್ವಕವಾಗಿ ಟೀಕಿಸುವ ಮೂಲಕ ಅದನ್ನು ದುರ್ಬಲಗೊಳಿಸುವ ಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಕ್ಫ್ ಕಾಯ್ದೆ ವಿಷಯದಲ್ಲಿ ಇತ್ತೀಚಿನ ಸುಪ್ರೀಂ ನಿಲುವು ಪ್ರಶ್ನಿಸಿ ಹಲವು ಬಿಜೆಪಿ ನಾಯಕರು ನ್ಯಾಯಾಲಯದ ಅಧಿಕಾರದ ವ್ಯಾಪ್ತಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಅದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಸಾಂವಿಧಾನಿಕವಾಗಿ ಮಹತ್ವದ ಹುದ್ದೆಯಲ್ಲಿ ಇರುವವರು, ಸಚಿವರು ಮತ್ತು ಬಿಜೆಪಿ ಸಂಸದರು ಸುಪ್ರೀಂಕೋರ್ಟ್ ವಿರುದ್ಧ ಟೀಕಾ ಪ್ರಹಾರ ನಡೆಸುವ ಮೂಲಕ ಅದನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಇಂಥ ಆರೋಪಗಳ ಮೂಲಕ ಸಂವಿಧಾನವು ಸುಪ್ರೀಂಕೋರ್ಟ್‌ಗೆ ನೀಡಿರುವ ಅಧಿಕಾರವನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಚುನಾವಣಾ ಬಾಂಡ್, ವಕ್ಫ್ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ಧ್ವನಿ ಎತ್ತಿದ್ದಕ್ಕೆ ಬಿಜೆಪಿ ಈ ರೀತಿ ನಡೆದುಕೊಳ್ಳುತ್ತಿದೆ. ಆದರೆ, ಸುಪ್ರೀಂಕೋರ್ಟ್ ಸ್ವತಂತ್ರ, ತಟಸ್ಥ ಮತ್ತು ಸಂವಿಧಾನವು ತನಗೆ ನೀಡಿರುವ ಅಧಿಕಾರ ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಬಯಸುತ್ತದೆ ಎಂದು ಜೈರಾಂ ರಮೇಶ್ ಹೇಳಿದರು.
ಕಾಂಗ್ರೆಸ್‌ನಿಂದ ಸಂವಿಧಾನ ಉಳಿಸಿ ಅಭಿಯಾನ
ನವದೆಹಲಿ: ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯ ಸಂದೇಶವನ್ನು ಮನೆಮನೆಗೂ ತಲುಪಿಸುವ ನಿಟ್ಟಿನಲ್ಲಿ ಏ.25ರಿಂದ ಮೇ.30ರವೆಗೆ ದೇಶವ್ಯಾಪಿ ‘ಸಂವಿಧಾನ ಉಳಿಸಿ’ ಅಭಿಯಾನ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಅಭಿಯಾನದ ಭಾಗವಾಗಿ ಏ.25ರಿಂದ ಏ.30ರವರೆಗೆ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ, ಮೇ 3ರಿಂದ ಮೇ 10ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ, ಮೇ11ರಿಂದ ಮೇ 17ರವರೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಮೇ 20ರಿಂದ ಮೇ30ರವರೆಗೆ ಮನೆ ಮನೆಗೂ ತೆರಳಿ ಅಭಿಯಾನ ನಡೆಸಲಾಗುವುದು ಎಂದು ಪಕ್ಷ ಪ್ರಕಟಿಸಿದೆ.