ನಾಳೆ ಅಲ್ಲ, ನಾಡಿದ್ದು ಮೋದಿ ಪ್ರಮಾಣ?

| Published : Jun 07 2024, 12:31 AM IST / Updated: Jun 07 2024, 08:03 AM IST

Narendra Modi NDA Meeting
ನಾಳೆ ಅಲ್ಲ, ನಾಡಿದ್ದು ಮೋದಿ ಪ್ರಮಾಣ?
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಎನ್‌ಡಿಎ ಸಂಸತ್‌ ಸದಸ್ಯರ ಸಭೆ ನಡೆಯಲಿದ್ದು, ಮೈತ್ರಿಕೂಟ ನಾಯಕ ಆಗಿ ಮೋದಿ ಆಯ್ಕೆಯಾಗಲಿದ್ದಾರೆ. ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡನೆಯಾಗಲಿದೆ.

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಬಹುಮತ ಪಡೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ, ಶುಕ್ರವಾರ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ.

ಜೊತೆಗೆ ಈ ಮೊದಲು ವರದಿಯಾದಂತೆ ಜೂ.8ರ ಶನಿವಾರದ ಬದಲು ಜೂ.9ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನೇಪಾಳ, ಬಾಂಗ್ಲಾದೇಶ, ಮಾರಿಷಸ್, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ಸೀಶೆಲ್ಸ್ ದೇಶದ ನಾಯಕರಿಗೆ ಸರ್ಕಾರ ಆಹ್ವಾನ ನೀಡಿದ್ದು, ಅವರೆಲ್ಲಾ ಭಾಗಿಯಾಗುವ ನಿರೀಕ್ಷೆ ಇದೆ.

ಎನ್‌ಡಿಎ ಸಭೆ:

ಎನ್‌ಡಿಎದ ನೂತನ 293 ಸದಸ್ಯರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಸಭೆ ಸೇರಿ, ನರೇಂದ್ರ ಮೋದಿ ಅವರನ್ನು ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆ ಮಾಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಮತ್ತು ಮೈತ್ರಿಕೂಟದ ನಾಯಕರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ ಎನ್ನಲಾಗಿದೆ.

ಬುಧವಾರ ಕೂಡಾ ಎನ್‌ಡಿಎ ನಾಯಕರು ಸಭೆ ಸೇರಿ ಮೋದಿಯನ್ನು ಮೈತ್ರಿಕೂಟದ ನಾಯಕ ಎಂದು ಘೋಷಿಸಿ ಸರ್ಕಾರ ರಚನೆಗೆ ತಮ್ಮ ಬೆಂಬಲ ಘೋಷಿಸಿದ್ದರು.

ಈ ನಡುವೆ ಸರ್ಕಾರ ರಚನೆ, ಸರ್ಕಾರದಲ್ಲಿ ಮೈತ್ರಿಕೂಟದ ಪಕ್ಷಗಳಿಗೆ ನೀಡಬೇಕಾದ ಸಚಿವ ಸ್ಥಾನ, ನೀಡಬೇಕಾದ ಖಾತೆಗಳ ಕುರಿತು ಗುರುವಾರ ಬಿಜೆಪಿ ನಾಯಕರು ಸಮಾಲೋಚನೆ ನಡೆಸಿದ್ದಾರೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನ ಪಡೆದು ಅಧಿಕಾರ ಪಡೆದುಕೊಂಡಿದೆ. ಬಿಜೆಪಿ 240 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಟಿಡಿಪಿ 16, ಜೆಡಿಯು 12 ಸ್ಥಾನ ಪಡೆದು ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.ಉದ್ಧವ್ ಠಾಕ್ರೆಗೆ ಬಿಜೆಪಿ ಗಾಳ?

ನವದೆಹಲಿ: ತೆಲುಗುದೇಶಂ, ಜೆಡಿಯು ಮೇಲಿನ ಪೂರ್ಣ ಅವಲಂಬನೆ ತಪ್ಪಿಸುವ ಉದ್ದೇಶದಿಂದ ಮತ್ತಷ್ಟು ಮಿತ್ರರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ಪಕ್ಷ, ಸಣ್ಣಪುಟ್ಟ ಪಕ್ಷಗಳು ಹಾಗೂ ಕೆಲ ಪಕ್ಷೇತರರಿಗೆ ಗಾಳ ಹಾಕಲು ಯೋಜಿಸಿದೆ ಎನ್ನಲಾಗಿದೆ.ರಾಹುಲ್‌ ಗಾಂಧಿ ಪ್ರತಿಪಕ್ಷ ನಾಯಕ?

ನವದೆಹಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಹಿಸಿಕೊಳ್ಳಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. 10 ವರ್ಷಗಳ ಬಳಿಕ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್‌ಗೆ ಲೋಕಸಭೆ ಅಧಿಕೃತ ಪ್ರತಿಪಕ್ಷ ಸ್ಥಾನದ ಮಾನ್ಯತೆ ಸಿಗುತ್ತಿದೆ.