ಹರ್ಯಾಣ ವಿಧಾನಸಭೆ ಚುನಾವಣೆ : ವಿನೇಶ್ ವಿರುದ್ಧ ಬಿಜೆಪಿ ಕ್ರೀಡಾ ಘಟಕದ ಸಹ ಸಂಚಾಲಕ ಕಣಕ್ಕೆ

| Published : Sep 11 2024, 01:11 AM IST / Updated: Sep 11 2024, 05:28 AM IST

ಸಾರಾಂಶ

ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿರುವ ಕುಸ್ತಿ ಪಟು ವಿನೇಶ್‌ ಪೋಗಟ್‌ರನ್ನು ಸೋಲಿಸಲು ಬಿಜೆಪಿ ಕ್ರೀಡಾ ಘಟಕದ ಸಹ ಸಂಚಾಲಕರನ್ನು ಕಣಕ್ಕಿಳಿಸಿದೆ. 

ಚಂಡೀಗಢ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿರುವ ಕುಸ್ತಿ ಪಟು ವಿನೇಶ್‌ ಪೋಗಟ್‌ರನ್ನು ಸೋಲಿಸಲು ಬಿಜೆಪಿ ಕ್ರೀಡಾ ಘಟಕದ ಸಹ ಸಂಚಾಲಕರನ್ನು ಕಣಕ್ಕಿಳಿಸಿದೆ. ವಿನೇಶ್‌ ವಿರುದ್ಧ ಜುಲಾನಾ ಕ್ಷೇತ್ರದಿಂದ ಯೋಗೇಶ್‌ ಬೈರಾಗಿ ಸ್ಪರ್ಧಿಸಲಿದ್ದಾರೆ.ಮಂಗಳವಾರ ಬಿಜೆಪಿ ಹರ್ಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿರುವ 21 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಕುತೂಹಲ ಕೆರಳಿಸಿರುವ ಜುಲಾನಾ ಕ್ಷೇತ್ರದಿಂದ ಹರಿಯಾಣ ಬಿಜೆಪಿ ಕ್ರೀಡಾ ಘಟಕದ ಸಹಸಂಚಾಲಕ, ಭಾರತೀಯ ಜನತಾ ಯುವ ಮೋರ್ಚಾ ಉಪಾಧ್ಯಕ್ಷ ಯೋಗೇಶ್‌ ಬೈರಾಗಿ ಅವರಿಗೆ ಟಿಕೆಟ್‌ ನೀಡಿದ್ದು, ಸ್ಪರ್ಧೆ ಮತ್ತಷ್ಟು ರಂಗೇರುವಂತೆ ಮಾಡಿದೆ.

======

ತನ್ನ ಆಡಿ ಕಾರು ಅಪಘಾತದ ಬಳಿಕ ಮಹಾ ಬಿಜೆಪಿ ಅಧ್ಯಕ್ಷನ ಪುತ್ರ ಪರಾರಿ

ನಾಗಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಬಿಜೆಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಚಂದ್ರಶೇಖರ್ ಬಾವನ್‌ಕುಳೆ ಅವರ ಪುತ್ರ ಸಂಕೇತ್ ಅವರ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಗರದ ರಾಮದಾಸ್‌ಪೇಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಘಟನೆಯ ನಂತರ, ಚಾಲಕನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಗಮನಾರ್ಹ ಎಂದರೆ ಕಾರಿನಲ್ಲಿದ್ದ ಸಂಕೇತ್ ಬಾವನಕುಳೆ ಸೇರಿದಂತೆ ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ‘ಸಂಕೇತ್‌ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

====

ಪಟೇಲ್‌ ಪ್ರತಿಮೆ ಬೀಳಲಿದೆ ಎಂದು ಟ್ವೀಟ್‌: ಎಫ್‌ಐಆರ್‌ ದಾಖಲು

ಕೆವಾಡಿಯಾ (ಗುಜರಾತ್‌): ಸ್ಟ್ಯಾಚೂ ಆಫ್‌ ಯುನಿಟಿ ಎಂದೇ ಪ್ರಸಿದ್ಧಿಯಾಗಿರುವ ಭಾರತದ ಮೊದಲ ಗೃಹಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದು ಯಾವುದೇ ಕ್ಷಣದಲ್ಲಿ ಬೀಳಲಿದೆ ಎಂದು ಸಾಮಾಜಿಕ ಮಾಧ್ಯಮ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.RaGa4India ಎಂಬ ಟ್ವೀಟರ್‌ ಖಾತೆಯಲ್ಲಿ ಸೆ.8 ರಂದು ಬೆಳಗ್ಗೆ 9.25ಕ್ಕೆ ‘ಸ್ಟ್ಯಾಚೂ ಆಫ್‌ ಯುನಿಟಿ ಮೇಲೆ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿರುವುದರಿಂದ ಯಾವಾಗ ಬೇಕಾದರೂ ಬೀಳಬಹುದು‘ ಎಂದು ಬರೆದು ನಿರ್ಮಾಣ ಹಂತದ ಫೋಟೊಗಳನ್ನು ಪೋಸ್ಟ್ ಮಾಡಿದ್ದನು. ಆದ್ದರಿಂದ ಈ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸದ್ಯಕ್ಕೆ ಈ ಪೋಸ್ಟನ್ನು ಅಳಿಸಲಾಗಿದೆ. ಈ ಪ್ರತಿಮೆಯಲ್ಲಿ 2018 ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

====

ವಿಚ್ಛೇದನ ಬಳಿಕ ‘ಡೈವೋರ್ಸ್‌’ ಹೆಸರಿನ ಸುಗಂಧ ದ್ರವ್ಯ!

ದುಬೈ: ಪತಿಯಿಂದ ಡೈವೋರ್ಸ್‌ ಪಡೆದ ಬಳಿಕ ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೀದ್ ಅಲ್ ಮಕ್ತೌಮ್ ಹೊಸ ಸುಗಂಧ ದ್ರವ್ಯ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ತಮ್ಮದೇ ಸ್ವಂತ ಬ್ರ್ಯಾಂಡ್‌ ಆರಂಭಿಸಿರುವ ರಾಜಕುಮಾರಿ ಅದಕ್ಕೆ ‘ಡೈವೋರ್ಸ್‌’ ಎಂದು ಹೆಸರಿಟಿದ್ದಾರೆ. ಆದರೆ ದುಬೈ ಮಾರುಕಟ್ಟೆಯಲ್ಲಿ ಈ ಸುಗಂಧ ದ್ರವ್ಯದ ಬೆಲೆ ಇನ್ನೂ ತಿಳಿದು ಬಂದಿಲ್ಲ.ಈ ಕುರಿತು ರಾಜಕುಮಾರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಘೋಷಿಸಿದ್ದು, ಮಹ್ರಾ ಎಂ1 ಹೆಸರಿನಲ್ಲಿ ಬ್ರ್ಯಾಂಡ್‌ ಸದ್ಯದಲ್ಲಿಯೇ ಬರಲಿದೆ ಎಂದು ಬರೆದಿದ್ದಾರೆ. ಈ ವರ್ಷದ ಜುಲೈ ತಿಂಗಳಿನಲ್ಲಿ ಶೈಖಾ ಮಹ್ರಾ ಪತಿಯಿಂದ ವಿಚ್ಛೇದನ ಪಡೆದಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸುವ ಮೂಲಕ ಸುದ್ದಿಯಾಗಿದ್ದರು.