ಕೇರಳದ ವಯನಾಡ್ ಲೋಕಸಭಾ ಕ್ಷೇತ್ರ : ಪ್ರಿಯಾಂಕಾ ವಿರುದ್ಧ ಬಿಜೆಪಿಯಿಂದ ನವ್ಯಾ ಸ್ಪರ್ಧೆ

| Published : Oct 20 2024, 01:45 AM IST / Updated: Oct 20 2024, 05:18 AM IST

Navya Haridas

ಸಾರಾಂಶ

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನ.13ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಬಿಜೆಪಿ, ನವ್ಯಾ ಹರಿದಾಸ್‌ ಅವರನ್ನು ಕಣಕ್ಕಿಳಿಸಿದೆ.

ವಯನಾಡು: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನ.13ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಬಿಜೆಪಿ, ನವ್ಯಾ ಹರಿದಾಸ್‌ ಅವರನ್ನು ಕಣಕ್ಕಿಳಿಸಿದೆ. 

ನವ್ಯಾ ಹರಿದಾಸ್‌ ಬಿಜೆಪಿ ಸ್ಥಳೀಯ ಮುಖಂಡರಾಗಿದ್ದು, ಇವರು ಕಲ್ಲಿಕೋಟೆ ಪಾಲಿಕೆಯಲ್ಲಿ ಕೌನ್ಸಿಲರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ವಯನಾಡ್‌ನಲ್ಲಿ ನಟಿ ಖುಷ್ಬೂ ಸುಂದರ್‌, ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಸುದ್ದಿ ಈ ಮುನ್ನ ಹರಿದಾಡಿತ್ತು.

ಜಾರ್ಖಂಡ್‌: ಬಿಜೆಪಿಯಿಂದ ಚಂಪೈ, ಸೀತಾ, ಮರಾಂಡಿ, ಮುಂಡಾ ಪತ್ನಿಗೆ ಟಿಕೆಟ್‌

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ 66 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರನ್ನು ಧನ್ವಾರ್ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಮಾಜಿ ಸಿಎಂ ಮತ್ತು ಮಾಜಿ ಜೆಎಂಎಂ ನಾಯಕ ಚಂಪೈ ಸೊರೇನ್ ಅವರನ್ನು ಸೆರೈಕೆಲಾದಿಂದ ಹಾಗೂ ಸೀತಾ ಸೊರೆನ್ ಅವರನ್ನು ಅವರ ಮಾವ ಮತ್ತು ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರ ಹಿಂದಿನ ಕ್ಷೇತ್ರ ಜಮ್ತಾರಾದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಸಿಎಂ ಅರ್ಜುನ್‌ ಮುಂಡಾ ಅವರ ಪತ್ನಿಗೂ ಟಿಕೆಟ್‌ ನೀಡಲಾಗಿದೆ.

ಜಾರ್ಖಂಡ್‌ ಚುನಾವಣೆ: ಇಂಡಿಯಾ ಕೂಟದಲ್ಲಿ ಒಡಕು

ರಾಂಚಿ (ಜಾರ್ಖಂಡ್‌) : ನವೆಂಬರ್‌ನಲ್ಲಿ ನಡೆಯಲಿರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಸ್ಪರ್ಧೆಗೆ ‘ಇಂಡಿಯಾ’ ಒಕ್ಕೂಟದಲ್ಲಿ ಬಿರುಕು ಮೂಡಿದೆ. ವಿಧಾನಸಭೆಯ 81 ಸ್ಥಾನಗಳ ಪೈಕಿ 70ರಲ್ಲಿ ಕಾಂಗ್ರೆಸ್‌ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ತಮ್ಮ ಅಭ್ಯರ್ಥಿಳನ್ನು ಕಣಕ್ಕಿಳಿಸಿಲು ನಿರ್ಧರಿಸಿವೆ ಹಾಗೂ ಉಳಿದ 11 ಕ್ಷೇತ್ರಗಳನ್ನು ಆರ್‌ಜೆಡಿ ಹಾಗೂ ಎಡಪಕ್ಷಗಳಿಗೆ ನೀಡಲು ನಿರ್ಧರಿಸಿವೆ. 

ಇದು ಕೂಟದಲ್ಲಿ ಒಡಕು ಮೂಡಲು ಕಾರಣವಾಗಿದೆ.ಆರ್‌ಜೆಡಿ ನಾಯಕ ಮನೋಜ್‌ ಕುಮಾರ್‌ ಝಾ ಮಾತನಾಡಿ, ‘ಕ್ಷೇತ್ರ ಹಂಚಿಕೆಯ ಬಗ್ಗೆ ಕಾಂಗ್ರೆಸ್‌, ಜೆಎಂಎಂ ಏಕಪಕ್ಷೀಯ ನಿರ್ಧಾರ ಕೈಗೊಂಡಿವೆ. ಕ್ಷೇತ್ರ ಹಂಚಿಕೆ ಎಂಬುದು 2 ನಿಮಿಷಗಳಲ್ಲಿ ಸಿದ್ಧಪಡಿಸುವ ನೂಡಲ್ಸ್‌ ಅಲ್ಲ. ಇದರಿಂದ ಅಸಮಾಧಾನ ಉಂಟಾಗಿದೆ. ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಜೆಎಂಎಂ ನಾಯಕ ಹಾಗೂ ಮುಖ್ಯಮಂತ್ರಿ ಹೇಮಂತ ಸೊರೇನ್‌, ‘81 ಸ್ಥಾನಗಳ ಪೈಕಿ 70ರಲ್ಲಿ ಜೆಎಂಎಂ-ಕಾಂಗ್ರೆಸ್‌ ಸ್ಪರ್ಧಿಸಲಿವೆ. ಉಳಿದ 11 ಕ್ಷೇತ್ರಗಳನ್ನು ಆರ್‌ಜೆಡಿ ಹಾಗೂ ಎಡರಂಕಕ್ಕೆ ನೀಡುತ್ತೇವೆ’ ಎಂದರು.ಚುನಾವಣೆಯು ನ.13 ಮತ್ತು 20 ರಂದು ನಡೆಯಲಿದೆ. ನ.23 ರಂದು ಫಲಿತಾಂಶ ಹೊರಬೀಳಲಿದೆ.