ಅಂಬೇಡ್ಕರ್‌ ಅವರೇ ಬಂದ್ರೂ ಸಂವಿಧಾನ ರದ್ದಾಗದು: ಮೋದಿ

| Published : Apr 13 2024, 01:07 AM IST / Updated: Apr 13 2024, 05:24 AM IST

ಅಂಬೇಡ್ಕರ್‌ ಅವರೇ ಬಂದ್ರೂ ಸಂವಿಧಾನ ರದ್ದಾಗದು: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರಕ್ಕೆ ಡಾ। ಬಿ.ಆರ್‌. ಅಂಬೇಡ್ಕರ್‌ ರಚಿತ ಭಾರತೀಯ ಸಂವಿಧಾನವೇ ಸರ್ವಸ್ವವಾಗಿದೆ. ಸ್ವತಃ ಅಂಬೇಡ್ಕರ್‌ ಅವರೇ ಬಂದರೂ ಸಂವಿಧಾನವನ್ನು ಈಗ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜೈಪುರ: ಕೇಂದ್ರ ಸರ್ಕಾರಕ್ಕೆ ಡಾ। ಬಿ.ಆರ್‌. ಅಂಬೇಡ್ಕರ್‌ ರಚಿತ ಭಾರತೀಯ ಸಂವಿಧಾನವೇ ಸರ್ವಸ್ವವಾಗಿದೆ. ಸ್ವತಃ ಅಂಬೇಡ್ಕರ್‌ ಅವರೇ ಬಂದರೂ ಸಂವಿಧಾನವನ್ನು ಈಗ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮೂಲಕ ಬಿಜೆಪಿಯು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತದೆ ಎಂದು ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ನೀಡಿದ ಹೇಳಿಕೆ ಆಧರಿಸಿ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮೋದಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಸ್ಥಾನದ ಬಾಢಮೇರ್‌ನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ‘ಪ್ರತಿಪಕ್ಷಗಳು ಸಂವಿಧಾನವನ್ನು ಬದಲಿಸುವ ಕುರಿತು ಸುದ್ದಿ ಹಬ್ಬಿಸುತ್ತಿವೆ. ಆದರೆ ನಮ್ಮ (ಕೇಂದ್ರ) ಸರ್ಕಾರಕ್ಕೆ ಅಂಬೇಡ್ಕರ್‌ ವಿರಚಿತ ಮೂಲ ಸಂವಿಧಾನವೇ ಆಧಾರಸ್ತಂಭವಾಗಿದೆ. ಸರ್ಕಾರದ ಪಾಲಿಗೆ ಸಂವಿಧಾನವೇ ಭಗವದ್ಗೀತೆ, ಕುರಾನ್‌, ಬೈಬಲ್‌. ರಾಮಾಯಣ. ಅದನ್ನು ಬದಲಾಯಿಸಲು ಸ್ವತಃ ಅಂಬೇಡ್ಕರ್‌ ಆದಿಯಾಗಿ ಯಾರಿಗೂ ಆಗದು. ಬದಲಾಗಿ ಕಾಂಗ್ರೆಸ್‌ ಪಕ್ಷವೇ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ನಡೆಸಿತ್ತು. ಮತ್ತೆ ಅದನ್ನು ಈಗ ಕಾರ್ಯಗತಗೊಳಿಸಲು ಸಂಚು ರೂಪಿಸುತ್ತಿದೆ’ ಎಂದು ಕಿಡಿ ಕಾರಿದರು.

ಕಳೆದ ತಿಂಗಳು ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದಾಗಿನಿಂದಲೂ ಪ್ರತಿಪಕ್ಷಗಳು ಬಿಜೆಪಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ಆರೋಪಿಸುತ್ತಿದೆ. ಇದುವರೆಗೂ ಬಿಜೆಪಿ ವತಿಯಿಂದ ಈ ಕುರಿತಾಗಿ ಯಾವುದೇ ಹೇಳಿಕೆ ಬಂದಿರಲಿಲ್ಲ.