ಸಾರಾಂಶ
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲು ಕಾರಣವಾದ 370ನೇ ವಿಧಿ ರದ್ದಾಗಿ ಸೋಮವಾರ 5 ವರ್ಷಗಳು ಸಂದಿವೆ.
ಶ್ರೀನಗರ/ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲು ಕಾರಣವಾದ 370ನೇ ವಿಧಿ ರದ್ದಾಗಿ ಸೋಮವಾರ 5 ವರ್ಷಗಳು ಸಂದಿವೆ. ಈ ನಿಮಿತ್ತ ಕಾಶ್ಮೀರದಲ್ಲಿ ಹಲವು ಸ್ಥಳೀಯ ಪಕ್ಷಗಳು ಕರಾಳ ದಿನ ಆಚರಿಸಿದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು, ‘370ನೇ ವಿಧಿ ರದ್ದತಿಯು ಬದಲಾವಣೆಯ ಪರ್ವಕಾಲ’ ಎಂದು ಹರ್ಷಿಸಿದ್ದಾರೆ.
ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ವಿರೋಧ ಇದ್ದ ಕಾರಣ ಭಾರಿ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿತ್ತು. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಕಾಶ್ಮೀರದ ರಾಜ್ಯ ಸ್ಥಾನಮಾನ ಕಳಚಿ ಈ ವಿಧಿ ಜಾರಿಗೊಳಿಸಿದ ಕೇಂದ್ರದ ಕ್ರಮವನ್ನು ಅವರು ಖಂಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ವಿಶೇಷ ಸ್ಥಾನಮಾನ ರದ್ದು ಮಾಡಿ ಕಾಶ್ಮೀರಿತನವನ್ನೂ ಮೋದಿ ಸರ್ಕಾರ ಕಳಚಿತು ಹಾಗೂ ಪ್ರಜಾಪ್ರಭುತ್ವವನ್ನೂ ಕಿತ್ತುಕೊಂಡಿತು’ ಎಂದು ಕಿಡಿಕಾರಿದರು.