ಕೇರಳದಲ್ಲಿ ಗೋಹತ್ಯೆ ನಡೆಸಿದ್ದರಿಂದಲೇ ವಯನಾಡಿನಲ್ಲಿ ಭೂಕುಸಿತ : ಬಿಜೆಪಿ ನಾಯಕ ವಿವಾದ

| Published : Aug 04 2024, 01:23 AM IST / Updated: Aug 04 2024, 04:54 AM IST

ಸಾರಾಂಶ

ಕೇರಳದಲ್ಲಿ ಗೋಹತ್ಯೆ ನಡೆಸಿದ್ದರಿಂದಲೇ ವಯನಾಡಿನಲ್ಲಿ ಭೂಕುಸಿತ ಉಂಟಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಸಂಸದ ಜ್ಞಾನದೇವ್‌ ಅಹುಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೈಪುರ: ಕೇರಳದಲ್ಲಿ ಗೋಹತ್ಯೆ ನಡೆಸಿದ್ದರಿಂದಲೇ ವಯನಾಡಿನಲ್ಲಿ ಭೂಕುಸಿತ ಉಂಟಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಸಂಸದ ಜ್ಞಾನದೇವ್‌ ಅಹುಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾದ್ಯಮದೊಂದಿಗೆ ಮಾತನಾಡಿದ ಅವರು, ‘ಗೋ ಹತ್ಯೆ ನಡೆಸಿದ ಕಾರಣವೇ ಭೂಕುಸಿತ ಸಂಭವಿಸಿದ್ದು, ಇದು ಅಂತ್ಯವಾಗುವ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಮೇಘಸ್ಫೋಟ ಹಾಗೂ ಭೂಕುಸಿತ ಸಾಮಾನ್ಯವಾದರೂ ಅವು ಈ ಮಟ್ಟದ ಅವಾಂತರ ಸೃಷ್ಟಿಸುವುದಿಲ್ಲ’ ಎಂದರು.

2018ರಿಂದ ಗೋಹತ್ಯೆ ನಡೆಯುತ್ತಿರುವ ಪ್ರದೇಶಗಳಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಕೇರಳ ಈಗಲೇ ಎಚ್ಚೆತ್ತುಕೊಂಡು ಗೋಹತ್ಯೆ ನಿಲ್ಲಿಸಿದರೆ ಒಳಿತು ಎಂದು ಅವರು ಎಚ್ಚರಿಸಿದರು.

ಕೇರಳದ ವಯನಾಡು, ಮುಂಡಕ್ಕೈ, ಚೂರಲ್‌ಮಲೆ ಹಾಗೂ ಮೆಪ್ಪಾಡಿಗಳಲ್ಲಿ ಜು.30ರಂದ ಭೂಕುಸಿತಗಳು ಸಂಭವಿಸುತ್ತಿದ್ದು, ಇದುವರೆಗೆ 350ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.