29ಕ್ಕೆ ಮೋದಿ, ಶಾ ಸೇರಿ 100 ಬಿಜೆಪಿಗರಿಗೆ ಟಿಕೆಟ್‌ ಘೋಷಣೆ?

| Published : Feb 25 2024, 01:52 AM IST / Updated: Feb 25 2024, 08:27 AM IST

ಸಾರಾಂಶ

ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಇದೇ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಇದೇ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಫೆ.29 ರಂದು ಸಭೆ ಸೇರಲಿದೆ. ನಂತರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

‘ಆಡಳಿತ ಪಕ್ಷವು 543 ಲೋಕಸಭಾ ಸ್ಥಾನಗಳಲ್ಲಿ 370 ಸ್ಥಾನಗಳನ್ನು ಗೆಲ್ಲುವ ಬೃಹತ್ ಗುರಿಯನ್ನು ಹೊಂದಿದೆ ಮತ್ತು ಎನ್‌ಡಿಎಗೆ 400 ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 

ಮೊದಲ ಪಟ್ಟಿಯಲ್ಲಿ ಬಿಜೆಪಿಗೆ ಕಠಿಣ ಹಾದಿ ಇರುವ ಪ.ಬಂಗಾಳ ಹಾಗೂ ತಮಿಳುನಾಡಿನ ಅಭ್ಯರ್ಥಿಗಳೂ ಇರಲಿದ್ದಾರೆ. ಏಕೆಂದರೆ ಈಗಲೇ ಅಲ್ಲಿ ಪಟ್ಟಿ ಪ್ರಕಟಿಸಿದರೆ ಅಭ್ಯರ್ಥಿಗಳು ಚುನಾವಣಾ ಸಿದ್ಧತೆಯನ್ನು ತಕ್ಷಣವೇ ಆರಂಭಿಸಲು ನೆರವಾಗಲಿದೆ. ಹೀಗಾಗಿ ಮೊದಲ ಪಟ್ಟಿಯು ನಿರ್ಣಾಯಕವಾಗಲಿದೆ’ ಎಂದು ಅವು ಹೇಳಿವೆ.

ಪ್ರಧಾನಿ ಮೋದಿ ಈಗ ವಾರಾಣಸಿಯಿಂದ ಸಂಸದರಾಗಿದ್ದಾರೆ. ಅಲ್ಲಿ ಅವರು 2 ಬಾರಿ ಗೆದ್ದಿದ್ದಾರೆ. ಅವರು 2014ರಲ್ಲಿ 3.37 ಲಕ್ಷ ಮತ ಮತ್ತು 2019ರಲ್ಲಿ 4.8 ಲಕ್ಷದ ಭಾರೀ ಅಂತರದಿಂದ ಗೆದ್ದಿದ್ದರು. 

ಅಮಿತ್ ಶಾ 2019ರ ಚುನಾವಣೆಯಲ್ಲಿ ಮೊದಲ ಬಾರಿ ಲೋಕಸಭೆಗೆ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದು ಹಿರಿಯ ನೇತಾರ ಎಲ್‌.ಕೆ.ಅಡ್ವಾಣಿ ಅವರ ಸಾಂಪ್ರದಾಯಿಕ ಕ್ಷೇತ್ರವಾಗಿತ್ತು.

ಕಳೆದ ವಾರವಷ್ಟೇ ಮೋದಿ ಬಿಜೆಪಿಗೆ 370 ಸೀಟು ಹಾಗೂ ಒಟ್ಟಾರೆ ಎನ್‌ಡಿಡಿಎಗೆ 400 ಸೀಟು ಬರುವಂತೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು.