2012ರಲ್ಲಿ ಉ.ಪ್ರದೇಶದಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿದ್ದಾಗ ಕೇಸು ದಾಖಲಾಗಿದ್ದು, ಬಿಜೆಪಿ ಸಂಸದೆ ರೀಟಾ ಬಹುಗುಣರಿಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ 6 ತಿಂಗಳು ಜೈಲು ಹಾಗೂ ದಂಡ ವಿಧಿಸಲಾಗಿದೆ.
ಲಖನೌ: 2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಯಾಗ್‌ರಾಜ್ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರಿಗೆ ಲಖನೌ ನ್ಯಾಯಾಲಯ ಶುಕ್ರವಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು 1,100 ರು. ದಂಡ ವಿಧಿಸಿದೆ.
ಮೂಲತಃ ಕಾಂಗ್ರೆಸ್ ನಾಯಕಿಯಾಗಿದ್ದ ರೀಟಾ 2017ರ ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿ ಸೇರಿ ಬಳಿಕ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು 2012ರ ವಿಧಾನಸಭೆ ಚುನಾವಣೆಯಲ್ಲಿ ರೀಟಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.
ಆಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಪ್ರಚಾರಕ್ಕೆ ತೆರೆಬಿದ್ದ ಮೇಲೂ ರೀಟಾ, ಕೃಷ್ಣನಗರದ ಬಜರಂಗನಗರ ಪ್ರದೇಶದಲ್ಲಿ ಬಹಿರಂಗ ಸಾರ್ವಜನಿಕ ಪ್ರಚಾರ ಸಭೆ ನಡೆಸಿದ್ದರು.
ಇದೇ ಆರೋಪದಡಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲೀಗ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲೇ ರೀಟಾ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಬಳಿಕ 2021ರಲ್ಲಿ ರೀಟಾರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ನಂತರ 20,000 ರು. ಬಾಂಡ್ ಮತ್ತು ಶ್ಯೂರಿಟಿ ಮೇರೆಗೆ ರೀಟಾರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.