ಸಾರಾಂಶ
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಒಟ್ಟು 288 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಳಿಗೆ ಪಕ್ಷದ ಹುರಿಯಾಳುಗಳ ಹೆಸರು ಅಂತಿಮವಾಗಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಅವರ ಸಾಂಪ್ರದಾಯಿಕ ಕ್ಷೇತ್ರವಾದ ನಾಗ್ಪುರ ನೈಋತ್ಯದಿಂದ ಟಿಕೆಟ್ ನೀಡಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಸಿಎಂ ಅಶೋಕ್ ಚವಾಣ್ ಪುತ್ರಿ ಶ್ರೀಜಯಾ ಚವಾಣ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಲ್ ಶೇಲಾರ್, ನಿತೇಶ್ ರಾಣೆ ಸೇರಿದಂತೆ ಹಲವು ಪ್ರಭಾವಿಗಳಿಗೆ ಬಿಜೆಪಿ ಮಣೆ ಹಾಕಿದೆ.
ಶಿವಸೇನೆಯ ಶಿಂಧೆ ಬಣ ಮತ್ತು ಎನ್‌ಸಿಪಿಯ ಪವಾರ್ ಬಣದ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 150 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದೆ.
ಗೌರಿ ಹತ್ಯೆ ಆರೋಪಿ ಶ್ರೀಕಾಂತ್ ಹುದ್ದೆಗೆ ಶಿವಸೇನೆ ತಡೆ
ಮುಂಬೈ:ಶಿವಸೇನೆ ಸೇರ್ಪಡೆಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗರ್ಕರ್‌ಗೆ ನೀಡಲಾಗಿದ್ದ ಹುದ್ದೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ರದ್ದುಗೊಳಿಸಿದ್ದಾರೆ. ಪಾಂಗರ್ಕರ್ ಶನಿವಾರ ಶಿವಸೇನೆ (ಶಿಂದೆ ಬಣ) ಸೇರಿದ್ದ. ಬಳಿಕ ಈತನಿಗೆ ಜಲ್ನಾ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಮಾಡಲಾಗಿತ್ತು. ಕೊಲೆ ಕೇಸಿನ ಆರೋಪಿಗೆ ಉತ್ತಮ ಸ್ಥಾನ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ನೇಮಕ ರದ್ದತಿಗೆ ಶಿಂಧೆ ಆದೇಶಿಸಿದ್ದಾರೆ.
2017 ಸೆ.5ರಂದು ನಡೆದಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 2018ರಲ್ಲಿ ಶ್ರೀಕಾಂತ್‌ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಕಳೆದ ಸೆ.4ರಂದಷ್ಟೇ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಅದರ ಬೆನ್ನಲ್ಲೇ ಈತ ಜಲ್ನಾ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದ. ಆದರೆ ಶಿವಸೇನೆ (ಶಿಂಧೆ ಬಣ)- ಬಿಜೆಪಿ- ಎನ್‌ಸಿಪಿ (ಅಜಿತ್ ಪವಾರ್ ಬಣ) ನಡುವೆ ಇನ್ನೂ ಟಿಕೆಟ್ ಹಂಚಿಕೆ ಅಂತಿಮವಾಗದ ಕಾರಣ, ಆತನನ್ನು ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಆದರೆ ಈ ನೇಮಕಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೇಮಕಕ್ಕೆ ತಡೆ ನೀಡಲಾಗಿದೆ.2001ರಿಂದ 2006ರವೆಗೆ ಅವಿಭಜಿತ ಶಿವಸೇನೆಯಿಂದ ಜಲ್ನಾ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಶ್ರೀಕಾಂತ್, 2011ರಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ಬಳಿಕ ಹಿಂದೂ ಜನಜಾಗೃತಿ ಸಮಿತಿ ಸೇರ್ಪಡೆಯಾಗಿದ್ದ.