ಸಾರಾಂಶ
ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೇ ಇದೇ ಮಾಸಾಂತ್ಯ ಇಲ್ಲವೇ ಮುಂದಿನ ತಿಂಗಳ ಆರಂಭದಲ್ಲಿ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಜೊತೆಗೆ ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ಆಯ್ಕೆಯೂ ಮಾಸಾಂತ್ಯಕ್ಕೆ ನಡೆಯುವುದು ನಿಚ್ಚಳ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂಬರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ವೇಳೆ ಮಹಾರಾಷ್ಟ್ರದಲ್ಲಿನ ಎನ್‌ಡಿಎ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿಗೆ ಸ್ಥಾನ ನೀಡಲಾಗುವುದು. ಜೊತೆಗೆ ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಅಲ್ಲಿನ ಕೆಲ ಮಿತ್ರರರಿಗೆ ಸ್ಥಾನ ನೀಡುವ ಮತ್ತು ಜಾತಿ ಸಮೀಕರಣದ ಆಧಾರದಲ್ಲಿ ಇನ್ನೊಂದಿಷ್ಟು ರಾಜ್ಯಗಳಿಗೂ ಸಂಪುಟದಲ್ಲಿಲ ಸ್ಥಾನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಬಿಜೆಪಿ ತನ್ನ ವಿವಿಧ ಹಂತದ ಸಂಘಟನಾ ಚುನಾವಣೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದು, ನೂತನ ಅಧ್ಯಕ್ಷರ ಆಯ್ಕೆಗೆ ಸಿದ್ಧತೆ ನಡೆಸಿದೆ. ಬಹುತೇಕ ಎಲ್ಲಾ ರಾಜ್ಯಗಳ ಅಧ್ಯಕ್ಷರ ಆಯ್ಕೆ ಬಳಿಕ ಮುಂದಿನ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಗಳ ಬಗ್ಗೆ ಆರ್‌ಎಸ್‌ಎಸ್ ಬಳಿ ಬಿಜೆಪಿ ಸಲಹೆ ಕೇಳಲಿದೆ. ಅದನ್ನು ಆಧರಿಸಿ ಮಾಸಾಂತ್ಯಕ್ಕೆ ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ ಎನ್ನಲಾಗಿದೆ.
ನೂತನ ಅಧ್ಯಕ್ಷರ ರೇಸ್‌ನಲ್ಲಿ ಈಗಾಗಲೇ ಮನೋಹರ್ ಲಾಲ್ ಖಟ್ಟರ್, ಧಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್ ಹೆಸರು ಕೇಳಿಬಂದಿದೆ.