ಸಾರಾಂಶ
- ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಂತಹ ಪಕ್ಷಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ - ನವಕರ್ನಾಟಕ ನಿರ್ಮಾಣ ಆಂದೋಲನದಿಂದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಈವರೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಂತಹ ಪಕ್ಷಗಳು ಯಾವುದೇ ಹಂತದಲ್ಲೂ ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಅಸ್ತಿತ್ವದ ತುರ್ತು ಅಗತ್ಯವಿದೆ. ಈ ಹಿನ್ನೆಲೆ ಆಂದೋಲನ ಆರಂಭಿಸಲಾಗಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಬುಧವಾರ ನವಕರ್ನಾಟಕ ನಿರ್ಮಾಣ ಆಂದೋಲನ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜನರು, ರೈತರು, ಕೂಲಿ ಕಾರ್ಮಿಕರಿಗೆ ಸ್ಪಂದಿಸುವ ಪಕ್ಷವಾಗಿ ಕರ್ನಾಟಕ ನಿರ್ಮಾಣ ಆಂದೋಲನಾ ಸ್ಥಾಪಿಸಲಾಗಿದೆ ಎಂದರು.ನಮ್ಮ ದಾರಿಯನ್ನು ನಾವೇ ಹುಡುಕಿಕೊಂಡು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಶೀಘ್ರವೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ತರುವ ಜಾಗೃತಿ ನಡೆದಿದೆ. ಈಗಾಗಲೇ ನವ ಕರ್ನಾಟಕ ನಿರ್ಮಾಣ ಆಂದೋಲನ ಹೆಸರಿನಲ್ಲಿ ರೈತ ಚಳವಳಿ, ದಲಿತ ಚಳವಳಿ, ಕನ್ನಡ ಭಾಷಾ ಚಳವಳಿ, ಮಹಿಳಾ ಚಳವಳಿ, ವಿದ್ಯಾರ್ಥಿ, ಯುವಜನರ ಚಳವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಜನರ ಮುಂದಿಡಲು, ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆಗೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಕೃಷಿ ನೀತಿ, ಮೀಸಲಾತಿ ನಿಯಮ, ಉದ್ಯೋಗ ನೀತಿ, ಶಿಕ್ಷಣ ಭಾಷಾ ನೀತಿ, ತೆರಿಗೆ ನೀತಿ, ಅನುದಾನ, ಅಭಿವೃದ್ಧಿ ಪರಿಹಾರ ನಿಧಿ, ಅರಣ್ಯ ನೀತಿ, ಗಡಿ ಸಮಸ್ಯೆ, ನದಿ ವಿವಾದ ಹೀಗೆ ಹಲವಾರು ವಿಚಾರಗಳಲ್ಲಿ ಕರ್ನಾಟಕ ತಾರತಮ್ಯ ಅನುಭವಿಸುತ್ತಿದೆ. ಕರ್ನಾಟಕದ ಎಲ್ಲ ಪಕ್ಷಗಳ ಸಂಸದರು ಅನ್ಯಾಯಗಳ ವಿರುದ್ಧ ಒಂದೇ ಒಂದೇ ಮಾತನ್ನೂ ಆಡುತ್ತಿಲ್ಲ. ಹೈಕಮಾಂಡ್‌ಗಳ ಆದೇಶಗಳಿಗೆ ಗೋಣು ಆಡಿಸುವ ಗೊಂಬೆಗಳಾಗಿದ್ದಾರೆ. ಇಂತಹವರಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.ಅಖಿಲ ಭಾರತ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ ಮಾತನಾಡಿ, ದಲಿತರು, ಹಿಂದುಳಿದವರು, ಅಸ್ಪೃಶ್ಯರು, ಹೋರಾಟಗಾರರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿವೆ. ನಿರುದ್ಯೋಗ ಹೆಚ್ಚುತ್ತಿದೆ. ರೈತರ ಆತ್ಮಹತ್ಯೆಯೇ ನಿಂತಿಲ್ಲ. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಹೊಸ ಶಕ್ತಿ ಅಧಿಕಾರಕ್ಕೆ ಬರಬೇಕಾಗಿದೆ. ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳೇ ಇಂತಹ ಬದಲಾವಣೆಗೆ ನಿದರ್ಶನಗಳಾಗಿವೆ ಎಂದು ತಿಳಿಸಿದರು.
ಆರ್‌ಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಮೋಹನ ರಾಜ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಕನ್ನಡಿಗರು ಬೇಸತ್ತಿದ್ದರೂ, ಅನಿವಾರ್ಯವಾಗಿ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್, ಮಗದೊಮ್ಮೆ ಜೆಡಿಎಸ್ ಮೈತ್ರಿಪಕ್ಷಗಳ ಆರಿಸುತ್ತಿದ್ದಾರೆ. ಆದರೆ, ಶೋಷಿತ, ಸೌಲಭ್ಯ ವಂಚಿತ ವರ್ಗಗಳಲ್ಲಿ ಹುಟ್ಟಿದ ಹೋರಾಟಗಾರರು, ಬುದ್ಧಿಜೀವಿಗಳೆಲ್ಲರೂ ಒಂದೆಡೆ ಕಲೆತು ಗಂಭೀರ ಚರ್ಚಿಸಿ, ಹೊಸದೊಂದು ಪರ್ಯಾಯ ಮಾರ್ಗ ರೂಪಿಸಲು ನಿರ್ಧರಿಸಿದ್ದಾರೆ. ನಮ್ಮೆಲ್ಲರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಲ್ಲ, ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಿ ಅಭಿವೃದ್ಧಿ ಸಾಧಿಸಬಲ್ಲ ಪ್ರಾದೇಶಿಕ ರಾಜಕೀಯ ಪಕ್ಷ ರೂಪಿಸುವುದೇ ನಮ್ಮೆಲ್ಲರ ನಿರ್ಧಾರ ಎಂದರು.ರೈತ ಸಂಘದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೀರಣ್ಣ, ಅರುಣಕುಮಾರ, ಚಂದ್ರಣ್ಣ ಕಂದನಕೋವಿ, ವೀರಣ್ಣ ಗೌಡ ಪಾಟೀಲ್, ಚಿನ್ನಸಮುದ್ರ ಶೇಖರ ನಾಯ್ಕ ಇತರರು ಇದ್ದರು.
ಸಭೆಗೂ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ಎಪಿಎಂಸಿವರೆಗೂ ಬೈಕ್ ರ್‍ಯಾಲಿ, ಪಾದಯಾತ್ರೆ ನಡೆಯಿತು.- - -
(ಕೋಟ್) * ಪರ್ಯಾಯ ರಾಜಕಾರಣ ಬೇಕು ಪರ್ಯಾಯ ರಾಜಕಾರಣವು ರಾಜ್ಯಕ್ಕೆ ಬೇಕೆ ಹೊರತು, ವೃತ್ತಿ ರಾಜಕಾರಣವಲ್ಲ. ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಂದ ಪರಿವರ್ತನಾ ರಾಜಕಾರಣ ಸಾಧ್ಯವೇ? ಇಷ್ಟು ದಿನ ಇಂತಹವರು ಮಾಡಿದ ಕೆಲಸಗಳು ಜನರನ್ನು ಸಮಸ್ಯೆಗಳಿಂದ ಹೊರತಂದಿಲ್ಲ. ಜನರ ಆರ್ಥಿಕ ಸ್ಥಿತಿ, ಜೀವನಮಟ್ಟವೂ ಸುಧಾರಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಅನಿವಾರ್ಯ, ಬಿಜೆಪಿಗೆ ಕಾಂಗ್ರೆಸ್ ಅಗತ್ಯ. ಇಂತಹ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಮೂರನೇ ಶಕ್ತಿ ಉದಯಿಸದಂತೆ ತಡೆಯುತ್ತಲೇ ಬಂದಿವೆ.- ಕೋಡಿಹಳ್ಳಿ ಚಂದ್ರಶೇಖರ, ರೈತನಾಯಕ
- - --16ಕೆಡಿವಿಜಿ4: ದಾವಣಗೆರೆಯಲ್ಲಿಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು.