ಸಾರಾಂಶ
ಮಹೂ(ಮಧ್ಯಪ್ರದೇಶ): ಬಿಜೆಪಿ ಮತ್ತು ಆರೆಸ್ಸೆಸ್‌ನವರು ''''ದೇಶ ದ್ರೋಹಿಗಳು''''. ಈಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಇವರು ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಇನ್ನೊಂದೆಡೆ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದ್ದಾರೆ. ಸಂವಿಧಾನಕ್ಕೆ ಅವಮಾನ ಆಗುವುದು ಕಂಡರೆ ಹೇಗಾದರೂ ಮಾಡಿ ಅದರ ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಡಾ.ಅಂಡೇಡ್ಕರ್ ಅವರ ಜನ್ಮಸ್ಥಳ ಮಧ್ಯಪ್ರದೇಶದ ಮೋವ್‌ನಲ್ಲಿ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಜೈ ಬಾಪು, ಜೈಭೀಮ್, ಜೈ ಸಂವಿಧಾನ್ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ‘ಧರ್ಮದ ಹೆಸರಲ್ಲಿ ಬಡವರ ಶೋಷಣೆಯನ್ನು ಕಾಂಗ್ರೆಸ್ ಯಾವತ್ತೂ ಸಹಿಸುವುದಿಲ್ಲ. ಸಂವಿಧಾನ ಉಳಿಸಲು ಕಾಂಗ್ರೆಸ್ ಕಾರ್ಯಕರ್ತರು ಒಂದಾಗಬೇಕು. ಇಲ್ಲದಿದ್ದರೆ ದಲಿತರು, ಹಿಂದುಳಿದವರು, ಗುಡ್ಡಗಾಡು ಜನರು ಮತ್ತು ಬಡವರು ಸಂಕಷ್ಟ ಅನುಭವಿಸಬೇಕಾದೀತು ಎಂದರು.
ರಕ್ಷಣೆಗೆ ರಾಹುಲ್ ಕರೆ: ಈ ನಡುವೆ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿಲ್ಲ ಎನ್ನುವ ಮೂಲಕ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವಮಾನ ಮಾಡಿದ್ದಾರೆ. ಇಂಥ ಹೇಳಿಕೆ ಮೂಲಕ ಅವರು ಅಂಬೇಡ್ಕರ್ ಅವರ ಪ್ರಯತ್ನ, ಅವರ ರಕ್ತ, ಬೆವರಿಗೆ ಅವಮಾನ ಮಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯರಿಗೂ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಶ್ರೀಮಂತರ ಪರ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಕೇವಲ ಶ್ರೀಮಂತರ ಪರ ಕೆಲಸ ಮಾಡುತ್ತಿದೆ. ದಲಿತರು, ಹಿಂದುಳಿದವರು, ಗುಡ್ಡಗಾಡು ಜನರು ಮತ್ತು ಬಡವರನ್ನು ಮತ್ತೊಮ್ಮೆ ಗುಲಾಮರನ್ನಾಗಿ ಮಾಡಲಾಗುತ್ತಿದೆ. ಉದ್ಯೋಗದ ಅವಕಾಶವನ್ನು ನಾಶ ಮಾಡಲಾಗುತ್ತಿದೆ ಮತ್ತು ಕೆಲವೇ ಕೆಲ ಬಂಡವಾಳಶಾಹಿಗಳ ಕೈಗೆ ದೇಶದ ಸಂಪತ್ತನ್ನು ನೀಡಲಾಗುತ್ತಿದೆ ಎಂದು ಕಿಡಿಕಾರಿದರು.
ಮೀಸಲಾತಿ ಮಿತಿ ಹೆಚ್ಚಿಸ್ತೇವೆ: ಪ್ರಧಾನಿ ಮೋದಿ ಅವರು ದೇಶದಲ್ಲಿ ಜಾತಿಗಣತಿ ಮಾಡಲು ಹೆದರುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಜಾತಿಗಣತಿ ಮಾಡಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.50ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಲಿದೆ. ಈ ಸಂಬಂಧ ಸಂಸತ್ತಿನಲ್ಲಿ ಮಸೂದೆ ಪಾಸ್ ಮಾಡಲಿದೆ ಎಂದು ರಾಹುಲ್ ಘೋಷಿಸಿದರು.