ಸಾರಾಂಶ
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ಮಂಗಳವಾರ ಇಲ್ಲಿ ಬಿಡುಗಡೆ ಮಾಡಲಾದ ಪ್ರಣಾಳಿಕೆ ಕೇವಲ ಟಿಡಿಪಿ ಮತ್ತು ಜನಸೇನಾ ಪಕ್ಷವನ್ನು ಪ್ರತಿನಿಧಿಸುತ್ತದೆಯೋ ಹೊರತೂ ನಮ್ಮನ್ನಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ರಾಜ್ಯಾಧ್ಯಕ್ಷೆ ಪುರಂದೇಶ್ವರಿ, ‘ ಟಿಡಿಪಿ ಮತ್ತು ಜನಸೇನಾ ಬಿಡುಗಡೆ ಮಾಡಿದ ಪ್ರಣಾಳಿಕೆ ಅವರ ಮೈತ್ರಿಗೆ ಸಂಬಂಧಿಸಿದ್ದಾಗಿವೆ. ಅವರ ಪ್ರಣಾಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ಕೇಂದ್ರದಲ್ಲಿ ಈಗಾಗಲೇ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ತಿಳಿಸಿದ ಎಲ್ಲಾ ಪ್ರಣಾಳಿಕೆಗಳನ್ನು ಆಂಧ್ರಪ್ರದೇಶದಲ್ಲಿ ಜಾರಿ ಮಾಡುತ್ತೇವೆ. ರಾಯಲಸೀಮಾ ಘೋಷಣೆಗೆ ಬಿಜೆಪಿ ಬದ್ಧವಾಗಿದೆ. ಕರ್ನೂಲ್‌ನಲ್ಲಿ ಹೈಕೋರ್ಟ್ ಕಟ್ಟುವ ಮೂಲಕ ಅದನ್ನು ಎರಡನೇ ರಾಜಧಾನಿ ಎಂದು ಘೋಷಣೆ ಮಾಡಲಿದ್ದೇವೆ ಎಂದರು.
ಪ್ರಣಾಳಿಕೆ ಬಿಡುಗಡೆ ವೇಳೆ ಹೈಡ್ರಾಮ:
ಟಿಡಿಪಿ-ಜನಸೇನಾ ಪಕ್ಷಗಳು ಎನ್‌ಡಿಎ ಒಕ್ಕೂಟದ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಆಂಧ್ರಪ್ರದೇಶದ ಬಿಜೆಪಿ ಚುನಾವಣಾ ಉಸ್ತವಾರಿ ಸಿದ್ಧಾರ್ಥ್ ನಾಥ್ ಸಿಂಗ್ ಅವರನ್ನು ದೂವಿಟ್ಟು ಭಾರಿ ಹೈಡ್ರಾಮ ಸೃಷ್ಟಿಸಿದ್ದಾರೆ. ಪತ್ರಕರ್ತರು ಸಿದ್ಧಾರ್ಥ್ ಅವರಿಗೂ ಪೋಸ್ಟರ್ ಕೊಡಿ ಎಂದು ಹೇಳೀದರೂ ಅವರಿಗೆ ಪೋಸ್ಟರ್ ನೀಡಲು ನಿರಾಕರಿಸಿದ್ದಾರೆ.