ಭಾರತ ದೇಶವೇ ಅಲ್ಲ: ಡಿಎಂಕೆ ರಾಜಾ ಕೀಳ್ನುಡಿ

| Published : Mar 06 2024, 02:22 AM IST / Updated: Mar 06 2024, 08:12 AM IST

D Raja

ಸಾರಾಂಶ

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ ಕೀಳಾಗಿ ಮಾತನಾಡಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ಆ ಪಕ್ಷದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎ.ರಾಜಾ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಮದುರೈ: ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ ಕೀಳಾಗಿ ಮಾತನಾಡಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ಆ ಪಕ್ಷದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎ.ರಾಜಾ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

‘ಭಾರತ ಒಂದು ದೇಶವೇ ಅಲ್ಲ’ ಎಂದಿರುವ ಅವರು, ‘ರಾಮ ಹಾಗೂ ಭಾರತ ಮಾತೆಯನ್ನು ನಾವು ನಂಬುವುದಿಲ್ಲ’ ಎಂದು ಹೇಳಿದ್ದಾರೆ.

ಮದುರೈನಲ್ಲಿ ಮಾರ್ಚ್‌ 5ರಂದು ನಡೆದ ಡಿಎಂಕೆ ಸಭೆಯೊಂದರಲ್ಲಿ ರಾಜಾ ಈ ಮಾತು ಹೇಳಿದ್ದಾರೆ ಎಂದು ಅವರ ತಮಿಳು ಭಾಷಣದ ತರ್ಜುಮೆ ಸಮೇತ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. 

ಅಲ್ಲದೆ, ಇದು ‘ದೇಶ ವಿಭಜನೆಗೆ ಇಂಡಿಯಾ ಒಕ್ಕೂಟ ನಡೆಸಿಸುವ ಹುನ್ನಾರ’ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ ಕೂಡ ರಾಜಾ ಮಾತನ್ನು ತಾನು ಒಪ್ಪುವುದಿಲ್ಲ ಎಂದಿದೆ.

ರಾಜಾ ಹೇಳಿದ್ದೇನು?
‘ಭಾರತವು ಒಂದು (ಒಂದು) ರಾಷ್ಟ್ರವಲ್ಲ. ರಾಷ್ಟ್ರವೆಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿಯನ್ನು ಸೂಚಿಸುತ್ತದೆ. ಆದರೆ ಭಾರತದಲ್ಲಿ ಈ ಲಕ್ಷಣಗಳಿಲ್ಲ. 

ಇದು ಉಪಖಂಡ ಮಾತ್ರ. ಏಕೆಂದರೆ ಇಲ್ಲಿ ತಮಿಳು ಒಂದು ರಾಷ್ಟ್ರ ಮತ್ತು ಒಂದು ಭಾಷೆ. ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ. ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ. ಅಂತಹ ಎಲ್ಲಾ ರಾಷ್ಟ್ರೀಯ ಜನಾಂಗಗಳು ಭಾರತವನ್ನು ರೂಪಿಸುತ್ತವೆ. 

ಆದ್ದರಿಂದ, ಭಾರತವು ಒಂದು ದೇಶವಲ್ಲ’ ಎಂದು ರಾಜಾ ಹೇಳಿದ್ದಾರೆ.‘ಭಾರತವು ವಿವಿಧ ಆಚರಣೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಉಪಖಂಡವಾಗಿದೆ. 

ತಮಿಳುನಾಡಿನಲ್ಲಿ ಒಂದು ಸಂಸ್ಕೃತಿಯಿದೆ ಮತ್ತು ಕೇರಳದಲ್ಲಿ ಮತ್ತೊಂದು ಸಂಸ್ಕೃತಿಯಿದೆ, ಹಾಗೆಯೇ ದೆಹಲಿಯಲ್ಲಿ ಒಂದು ಸಂಸ್ಕೃತಿಯಿದೆ, ಒಡಿಶಾದಲ್ಲಿ ಮತ್ತೊಂದು ಸಂಸ್ಕೃತಿಯಿದೆ. 

ಮಣಿಪುರದಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ, ಇದು ಸಾಂಸ್ಕೃತಿಕ ಅಂಶವಾಗಿದೆ. ಕಾಶ್ಮೀರದಲ್ಲಿ ಒಂದೊಂದು ಸಂಸ್ಕೃತಿ ಇದೆ. ಪ್ರತಿಯೊಂದು ಸಂಸ್ಕೃತಿಯನ್ನು ಗುರುತಿಸಬೇಕು. 

ಸಮುದಾಯವೊಂದು ಗೋಮಾಂಸ ತಿಂದರೆ ಅದಕ್ಕೆ ನೀವು ಮನ್ನಣೆ ಕೊಡಿ. ಅದೇ ವಿವಿಧತೆಯಲ್ಲಿ ಏಕತೆ. ಅವರೇನು ನೀವೂ ಗೋಮಾಂಸ ತಿನ್ನಿ ಅಂತಾರಾ? ನಿಮ್ಮ ಪ್ರಾಬ್ಲಂ ಏನು?’ ಎಂದು ಪ್ರಶ್ನಿಸಿದರು.

ಇನ್ನು ರಾಮ ಹಾಗೂ ಭಾರತ ಮಾತಾ ಬಗ್ಗೆ ಮಾತನಾಡಿದ ರಾಜಾ, ‘ನೀವು ಜೈ ಶ್ರೀರಾಂ ಹಾಗೂ ಭಾರತ ಮಾತಾ ಕೀ ಜೈ ಎನ್ನುತ್ತೀರಿ. ನಾವು ತಮಿಳುನಾಡಿನವರು ಜೈ ಶ್ರೀರಾಂ ಹಾಗೂ ಭಾರತ ಮಾತೆಯನ್ನು ನಂಬುವುದಿಲ್ಲ. 

ತಮಿಳರು ರಾಮನ ದ್ವೇಷಿಗಳು ಎಂದು ನೀವು ಹೇಳಿ, ನನಗೇನೂ ಚಿಂತೆಯಿಲ್ಲ. ಏಕೆಂದರೆ ರಾಮಾಯಣ ಹಾಗೂ ರಾಮನ ಮೇಲೆ ನನಗೆ ನಂಬಿಕೆಯೇ ಇಲ್ಲ. ರಾಮನಿಗೆ ನಾಲ್ವರು ಅಣ್ತಮ್ಮಂದಿರು. ಇನ್ನೆರಡು ಕೋತಿಗಳನ್ನೂ 5 ಹಾಗೂ 6ನೇ ಅಣ್ತಮ್ಮಂದಿರು ಅಂತಾರೆ. ಛಿ.. ಈಡಿಯಟ್ಸ್‌’ ಎಂದು ಟೀಕಿಸಿದರು.