ಸಾರಾಂಶ
ತ್ರಿಶೂರ್: ಮುಂದಿನ ತಿಂಗಳು ಕೇರಳದ ಪಟ್ಟಣಂತಿಟ್ಟದ ಪಂಪದಲ್ಲಿ ನಡೆಯಲಿರುವ ಜಾಗತಿಕ ಅಯ್ಯಪ್ಪ ಭಕ್ತರ ಸಂಗಮಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಆಹ್ವಾನಿಸಿರುವುದಕ್ಕೆ ಕೇರಳ ಬಿಜೆಪಿ ಕಿಡಿಕಾರಿದ್ದು,‘ ಇದು ಹಿಟ್ಲರ್, ಯುಹೂದಿಗಳನ್ನು ಮೆಚ್ಚಿಕೊಂಡಂತಿದೆ ’ ಎಂದು ವ್ಯಂಗ್ಯವಾಡಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಕಿಡಿಕಾರಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಸರ್ಕಾರ ಇದನ್ನು ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ., ‘ ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಡಿಎಂಕೆ ಶಬರಿಮಲೆ ಕಾರ್ಯಕ್ರಮಕ್ಕೆ ಹೋಗುವುದು ಹಿಟ್ಲರ್ ಯುಹೂದಿಗಳನ್ನು ಮೆಚ್ಚಿದಂತೆ, ರಾಹುಲ್ ಗಾಂಧಿ ಸತ್ಯ ಹೇಳುವುದು, ಒಸಮಾ ಬಿನ್ ಲಾಡೆನ್ ಶಾಂತಿಯ ದೇವದೂತನಾಗುವುದು, ಹಮಾಸ್/ಜಮಾತ್ ಇಸ್ಲಾಮಿ ಇತರ ಜನರ ನಂಬಿಕೆಯನ್ನು ಗೌರವಿಸುವುದು, ಕಾಂಗ್ರೆಸ್/ ಇಂಡಿಯಾ ಕೂಟ ವಂಶಪಾರಂಪರ್ಯ, ಭ್ರಷ್ಟಾಚಾರ ತ್ಯಜಿಸುವುದು ಹೇಗೆ ಅವಾಸ್ತವಿಕವೋ ಹಾಗೆಯೇ ಇದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ ಭರವಸೆ ಜುಮ್ಲಾ ಎಂದ ಲಾಲು ಪುತ್ರ ತೇಜಸ್ವಿ ವಿರುದ್ಧ ಮಹಾದಲ್ಲಿ ಕೇಸು
ಗಡ್ಚಿರೋಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಬಿಹಾರದ ವಿಪಕ್ಷ ನಾಯಕ, ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ವಿರುದ್ಧ ಮಹಾರಾಷ್ಟ್ರದಲ್ಲಿ ಕೇಸು ದಾಖಲಾಗಿದೆ. ಮೋದಿ ನೀಡುವ ಭರವಸೆಗಳು ಜುಮ್ಲಾ (ವಾಕ್ಚಾತುರ್ಯ) ಎಂದಿದ್ದರು. ಈ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ಮಹಾರಾಷ್ಟ್ರದ ಗಢ್‌ಚಿರೋಲಿ ಬಿಜೆಪಿ ಶಾಸಕ ಮಿಲಿಂದ್ ದೂರು ನೀಡಿದ್ದರು. ಈ ನಡುವೆ ತಮ್ಮ ವಿರುದ್ಧ ಕೇಸು ದಾಖಲಿಸಿದ್ದಕ್ಕೆ ಕಿಡಿಕಾರಿರುವ ತೇಜಸ್ವಿ, ‘ನಾನು ಯಾವುದಕ್ಕೂ ಹೆದರುವುದಿಲ್ಲ. ಸತ್ಯವನ್ನು ಹೇಳುವುದು ಮುಂದುವರಿಸುತ್ತೇನೆ’. ಎಂದಿದ್ದಾರೆ.
ನಿಷೇಧಿತ ಜಮಾತ್ ಹಿಡಿತದ 215 ಶಾಲೆ ಕಾಶ್ಮೀರ ಸರ್ಕಾರಕ್ಕೆ
ಶ್ರೀನಗರ: ನಿಷೇಧಿತ ಜಮಾತ್ ಎ ಇಸ್ಲಾಮಿ (ಜೆಇಐ) ಹಿಡಿತದಲ್ಲಿದ್ದ 215 ಶಾಲೆಗಳನ್ನು ಜಮ್ಮು ಕಾಶ್ಮೀರ ಸರ್ಕಾರ ತನ್ನ ಹಿಡಿತಕ್ಕೆ ಪಡೆದಿದೆ. ಶನಿವಾರ ಬೆಳಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ 10 ಜಿಲ್ಲೆಗಳಲ್ಲಿನ ಜಮಾತ್ ಮತ್ತು ಫಲಾ ಎ ಅಲಾಮ್ ಮಂಡಳಿ ಅಧೀನದ 215 ಶಾಲೆಗಳಿಗೆ ತೆರಳಿ ಅಲ್ಲಿನ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿ, ಆಡಳಿತವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕೇಂದ್ರ ಸರ್ಕಾರವು 2019 ಮತ್ತು 2024ರಲ್ಲಿ ಜಮಾತ್ ಸಂಘಟನೆಯನ್ನು ನಿಷೇಧಿಸಿತ್ತು. ಇದರ ಅಧೀನದ ಶಾಲೆಗಳ ಬಗ್ಗೆಯೂ ಸಹ ಗುಪ್ತಚರ ಇಲಾಖೆ ಕಳವಳ ವ್ಯಕಪಡಿಸಿತ್ತು.
ತೂಕ ಇಳಿಕೆ ಬಗ್ಗೆ ದಾರಿ ತಪ್ಪಿಸುವ ಜಾಹೀರಾತು: ವಿಎಲ್‌ಸಿಸಿಗೆ 3 ಲಕ್ಷ ದಂಡ
ನವದೆಹಲಿ: ತೂಕ ಇಳಿಕೆ ಚಿಕಿತ್ಸೆ ಕುರಿತು ದಿಕ್ಕು ತಪ್ಪಿಸುವ ಜಾಹೀರಾತು ನೀಡಿದ್ದ ಪ್ರಕರಣದಲ್ಲಿ ವಿಎಲ್‌ಸಿಸಿ ಲಿಮಿಟೆಡ್ (ವಂದನಾ ಲೂತ್ರಾ ಕರ್ಲ್ಸ್ ಮತ್ತು ಕರ್ವ್ಸ್) ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 3 ಲಕ್ಷ ರು. ದಂಡ ವಿಧಿಸಿದೆ. ಅಮೆರಿಕದ ಎಫ್‌ಡಿಎ ಅನುಮೋದಿತ ಯಂತ್ರದ ಚಿಕಿತ್ಸೆಯ ಮೂಲಕ ಬೊಜ್ಜು ಕರಗಿಸಿ ತೆಳ್ಳಗಾಗಬಹುದು ಎಂದು ಕಂಪನಿ ಜಾಹೀರಾತು ನೀಡಿತ್ತು. ಆದರೆ ಒಂದೇ ದಿನದಲ್ಲ ಒಂದು ಇಂಚು ಬೊಜ್ಜು ಕರಗಿಸಬಹುದು ಎಂಬ ಮಾಹಿತಿ ಸುಳ್ಳೆಂಬ ಕಾರಣ ಈ ದಂಡ ವಿಧಿಸಲಾಗಿದೆ.
ಶ್ರೀಕೃಷ್ಣ ಬೆಣ್ಣೆಕಳ್ಳ ಅಲ್ಲ: ಮ.ಪ್ರ. ಸಿಎಂ ವಿವಾದ
ಭೋಪಾಲ್: ಶ್ರೀಕೃಷ್ಣ ಬೆಣ್ಣೆಕಳ್ಳ ಅಲ್ಲ, ಆತನನ್ನು ಆ ರೀತಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾದವ್, ‘ಕೃಷ್ಣನನ್ನು ಬೆಣ್ಣೆಕಳ್ಳ ಎಂದು ಕರೆಯುವುದು ಅನುಚಿತ ಎನಿಸುತ್ತದೆ. ಅವನು ಕಂಸ ತನ್ನ ಮೇಲೆ ಮಾಡುತ್ತಿದ್ದ ದಬ್ಬಾಳಿಕೆ ವಿರೋಧಿಸಲು ಬೆಣ್ಣೆ ಕದಿಯುತ್ತಿದ್ದ. ಆತನ ದನಗಾಹಿ ಹುಡುಗರು ಬೆಣ್ಣೆಯನ್ನು ತಾವೇ ತಿನ್ನುತ್ತಿದ್ದರು ಅಥವಾ ಮಡಕೆಗಳನ್ನು ಒಡೆಯುತ್ತಿದ್ದರು. ಆದರೆ ಶತ್ರುಗಳಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದರು. ಕಂಸನ ವಿರುದ್ಧ ದಂಗೆ ಹೂಡುವುದು ಶ್ರೀಕೃಷ್ಣನ ಉದ್ದೇಶವಾಗಿತ್ತು. ಇದನ್ನು ತಿಳಿಯದೆ ಬೆಣ್ಣೆಕಳ್ಳ ಎನ್ನುತ್ತೇವೆ’ ಎಂದರು. ಅವರ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ‘ಮೋಹನ್ ಯಾದವ್ ತಮ್ಮದೇ ಆದ ಇತಿಹಾಸ ಬರೆಯಲು ಮತ್ತು ಸನಾತನ ಧರ್ಮದ ಪ್ರಾಚೀನ ಕಥೆಗಳನ್ನು ಬದಲಾಯಿಸಲು ಮುಂದಾಗಿದ್ದಾರೆ’ ಎಂದು ಟೀಕಿಸಿದೆ.