ವಯನಾಡು ಬಳಿಕ ರಾಯ್‌ಬರೇಲಿ ಸ್ಪರ್ಧೆಗೆ ಟಾಂಗ್‌ ನೀಡಿರುವ ಬಿಜೆಪಿ ಓಡು ರಾಹುಲ್‌ ಓಡು ಎಂದು ಅಣಕವಾಡಿದೆ.

ನವದೆಹಲಿ: ವಯನಾಡು ಬಳಿಕ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧೆ ಬಗ್ಗೆ ಬಿಜೆಪಿ ಅಣಕವಾಡಿದ್ದು, ‘ಓಡು ರಾಹುಲ್‌ ಓಡು’ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಇಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ದುಶ್ಯಂತ್‌ ಕುಮಾರ್‌ ಗೌತಮ್‌, ‘ರಾಹುಲ್‌ ಗಾಂಧಿಗೆ ಸದಾ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುವ ಪರಿಸ್ಥಿತಿ ಬಂದಿದೆ. ಸೋಲುವ ಭೀತಿಯಿಂದ ಪಲಾಯನ ಮಾಡಬೇಡಿ ಎಂದು ಬಹಳ ಹಿಂದೆಯೇ ಪ್ರಧಾನಿ ಕಿವಿಮಾತು ಹೇಳಿದ್ದರು. 

ರಾಹುಲ್‌ ಇನ್ನೂ ಒಬ್ಬ ಬಾಲಕ. ಅವರಿಗೆ ಓಡುವುದನ್ನು ಎಲ್ಲರೂ ನಾವು ಪ್ರೋತ್ಸಾಹಿಸಬೇಕು. ಆದರೆ ಜನರೇ ಅವರನ್ನು ತಿರಸ್ಕರಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವ ಮೂಲಕ ವಯನಾಡ್‌ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.