ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅನ್ಯಪಕ್ಷಗಳಿಂದ ಬಿಜೆಪಿಗೆ ಬರಲು ಇಚ್ಛಿಸುವವರ ಪೂರ್ವಾಪರ ಸಮೀಕ್ಷೆ ನಡೆಸಲು ಕೇಸರಿ ಪಕ್ಷದಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಷರತ್ತು ವಿಧಿಸಿ ಪಕ್ಷಕ್ಕೆ ಬರುವವರನ್ನು ಅಥವಾ ಯಾವುದೋ ಉದ್ದೇಶ ಇರಿಸಿಕೊಂಡು ಪಕ್ಷಕ್ಕೆ ಬರುವವರನ್ನು ಅಥವಾ ಪದೇ-ಪದೇ ಪಕ್ಷ ಬದಲಿಸುವ ಖಯಾಲಿಯ ವ್ಯಕ್ತಿಗಳನ್ನು ಮೊದಲ ಹಂತದಲ್ಲೇ ತಿರಸ್ಕರಿಸಿ, ಅವರ ಬಿಜೆಪಿ ಸೇರ್ಪಡೆಗೆ ತಡೆ ಒಡ್ಡಲಿದೆ.
ಡಿ.6ರಂದು ಈ ಸಮಿತಿ ಮೊದಲ ಸಭೆ ನಡೆಸಲಿದೆ. ಈ ಸಮಿತಿಯ ಸದಸ್ಯರು ಬಿಜೆಪಿಗೆ ಅನ್ಯಪಕ್ಷಗಳಿಂದ ಬರುವವರ ವಿಶ್ವಾಸಾರ್ಹತೆ, ಕಷ್ಟ ಕಾಲದಲ್ಲಿ ಪಕ್ಷಕ್ಕೆ ನೆರವು ನೀಡುವುದು, ಅವರ ನಿಯತ್ತು, ವಿಧೇಯತೆಗಳನ್ನು ಪರಿಶೀಲಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಲಿದೆ. ಸಮಿತಿಯ ವರದಿ ಸಕಾರಾತ್ಮಕವಾಗಿದ್ದರೆ ಮಾತ್ರ, ಆಕಾಂಕ್ಷಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.ಇದೇ ವೇಳೆ, ಕೆಲವರು ಪಕ್ಷ ಸೇರ್ಪಡೆಗೂ ಮುನ್ನ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಇನ್ನು ಕೆಲವರು ಬಿಜೆಪಿ ಸೋತರೆ ಮಾತೃ ಪಕ್ಷಕ್ಕೆ ಮರಳುವ ಚಂಚಲ ಬುದ್ಧಿಯವರಾಗಿರುತ್ತಾರೆ. ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಸಮಿತಿ ತೀರ್ಮಾನಿಸುತ್ತದೆ.ಈ ಹಿಂದೆ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಬಿಜೆಪಿಗೆ ಬಂದಿದ್ದ ಮುಕುಲ್ ರಾಯ್, ಚುನಾವಣೆಯಲ್ಲಿ ಟಿಎಂಸಿ ಗೆದ್ದ ಕಾರಣ ಪಕ್ಷ ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ಆಯಾರಾಂ ಗಯಾರಾಂ ಪಕ್ಷಾಂತರಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬಿಜೆಪಿ ಇಂತಹ ತಂತ್ರ ಹೆಣೆದಿದೆ. 2024ಕ್ಕೆ ಪ್ರಧಾನಿ ನರೇಂದ್ರ ಮೋದಿ 3ನೇ ಸಲ ಅಯ್ಕೆ ಬಯಸಿರುವ ಹಿನ್ನೆಲೆಲ್ಲಿ ಆಯಾರಾಂ ಗಯಾರಾಂಗಳಿಗೆ ಪಕ್ಷದಲ್ಲಿ ಸ್ಥಾನವನ್ನೇ ನೀಡದಿರಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.