ಫುಟ್ಪಾತ್‌ ಮೇಲೆ ಮಲಗುತ್ತಿದ್ದ ಮಾಝಿ ಈಗ ಒಡಿಶಾ ಸಿಎಂ

| Published : Jun 13 2024, 12:50 AM IST / Updated: Jun 13 2024, 05:28 AM IST

ಫುಟ್ಪಾತ್‌ ಮೇಲೆ ಮಲಗುತ್ತಿದ್ದ ಮಾಝಿ ಈಗ ಒಡಿಶಾ ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಭುವನೇಶ್ವರ: ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ನವೀನ್‌ ಪಟ್ನಾಯಕ್‌ರ ಸುಧೀರ್ಘ 24 ವರ್ಷದ ಆಡಳಿತಕ್ಕೆ ಅಂತ್ಯ ಹಾಡಿ ಒಡಿಶಾದ 15ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಜೊತೆಗೆ ಒಡಿಶಾದಲ್ಲಿ ಬಿಜೆಪಿಯ ಮೊದಲ ಸಿಎಂ ಎಂಬ ದಾಖಲೆಗೂ ಪಾತ್ರರಾದರು.

ಮಾಝಿ ಜೊತೆಗೆ ಕೆ.ವಿ ಸಿಂಗ್‌ ದೇವ್‌ ಹಾಗೂ ಪಾರ್ವತಿ ಪರಿದಾ ಅವರು ಉಪ ಮುಖ್ಯಮಂತ್ರಿಗಳಾಗಿ ರಾಜ್ಯಪಾಲ ರಘುವರ್‌ ದಾಸ್‌ ಅವರಿಂದ ಅಧಿಕಾರ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಜರಿದ್ದರು. ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ 147 ಕ್ಷೇತ್ರಗಳಲ್ಲಿ ಬಿಜೆಪಿ 78 ಕ್ಷೇತ್ರಗಳನ್ನು ಗೆದ್ದಿದೆ.

ವೇದಿಕೆ ಮೇಲೆ ಮಾಜಿ ಸಿಎಂ ನವೀನ್‌ ಪಟ್ನಾಯಕ್‌

ಬುಧವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕೂಡಾ ವೇದಿಕೆ ಮೇಲೆ ಆಸೀನರಾಗಿದ್ದರು. ನವೀನ್‌ರನ್ನು ಗೃಹ ಸಚಿವ ಅಮಿತ್ ಶಾ ಆದಿಯಾಗಿ ಬಿಜೆಪಿ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಬಂದ ಮೋದಿ ಕೂಡಾ ನವೀನ್‌ ಜೊತೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ನವೀನ್‌ರ ಬಿಜೆಡಿ ಮತ್ತು ಬಿಜೆಪಿ ತೀವ್ರ ಸೆಣಸಾಟ ನಡೆಸಿದ್ದವು.

==

ಪುಟ್ಪಾತ್‌ ಮೇಲೆ ಮಲಗಿದ್ದ ಮಾಝಿ

ಕಾನೂನು ಪದವಿ ಮಾಡಿದ್ದ ಮಾಝಿ ಮೊದಲಿಗೆ ಆರ್‌ಎಸ್‌ಎಸ್‌ ಶಾಲೆಯಲ್ಲಿ ಶಿಕ್ಷಕರಾಗಿ ಅಲ್ಪ ಸಮಯ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಬುಡಕಟ್ಟು ಜನರ ಪರ ಕಾನೂನು ಹೋರಾಟ ನಡೆಸಲು ವಕೀಲಿಕೆ ಕೂಡಾ ನಡೆಸಿದ್ದರು. ಬಳಿಕ ಸರಪಂಚ್‌ ಆಗಿ 1997-2000ದವರೆಗೆ ಕೆಲಸ ಮಾಡಿದರು. ಬಳಿಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಮಾಝಿ 2000ದಿಂದ ಸತತ ಎರಡು ಬಾರಿ ಕ್ಯೋಂಝಾರ್‌ ಕ್ಷೇತ್ರದಿಂದ ಶಾಸಕರಾಗಿದ್ದರು. 2009 ಹಾಗೂ 2014ರಲ್ಲಿ ಸೋಲನ್ನಪ್ಪಿದ ಮಾಝಿ ಬಳಿಕ ಮತ್ತೆ 2019ರಲ್ಲಿ ಗೆದ್ದು ಬೀಗಿದರು. ತಾವು ಬಿಜೆಪಿ ಶಾಸಕರಾಗಿದ್ದ ವೇಳೆ ತಮಗೆ ಸರ್ಕಾರದ ನಿವೇಶನ ದೊರಕದೆ ಹಲವು ದಿನಗಳು ಪಾದಾಚಾರಿ ಮಾರ್ಗದಲ್ಲಿ ಮಲಗಿದ್ದು, ಅಲ್ಲಿ ತಮ್ಮ ಫೋನ್‌ ಸಹ ಕಳೆದುಕೊಂಡಿದ್ದಾಗಿ ಅವರು ಹೇಳಿದ್ದರು. ಇವರು ರಾಜ್ಯದ ಅಕ್ರಮ ಗಣಿಗಾರಿಕೆ ಹೋರಾಟದ ವೇಳೆ ಗಣಿಗಾರಿಕೆಯವರ ದಾಳಿ ವೇಳೆ ಕೂದಲೆಳೆಯಲ್ಲಿ ಪಾರಾಗಿದ್ದರು.