ಸಾರಾಂಶ
ದಾವೋಸ್: ಭಾರತವನ್ನು ‘ಯಶಸ್ಸಿನ ಅದ್ಭುತ ಯಶೋಗಾಥೆ’ ಎಂದು ಬಣ್ಣಿಸಿರುವ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್, ಪ್ರಧಾನಿ ನರೇಂದ್ರ ಮೋದಿ ಅವರ ನೀತಿ ಮತ್ತು ಯೋಜನೆಗಳು ಭಾರತೀಯರ ಪಾಲಿಗೆ ಅತ್ಯಂತ ಲಾಭದಾಯಕವಾಗಿ ಹೊರಹೊಮ್ಮಿವೆ ಎಂದು ಬಣ್ಣಿಸಿದ್ದಾರೆ.
ಇಲ್ಲಿ ಆಯೋಜಿತವಾಗಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗದಲ್ಲಿ ಮಾತನಾಡಿದ ಬ್ಲಿಂಕನ್, ‘ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಅತ್ಯುತ್ತಮ ಸಂಬಂಧ ಹೊಂದಿದ್ದು, ಅವರ ನಡುವಣ ಸಂಬಂಧ ಉಭಯ ದೇಶಗಳ ನಡುವಿನ ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ.
ಉಭಯ ದೇಶಗಳ ನಡುವಣ ಸಂಬಂಧ ದಿನೇ ದಿನೇ ವೃದ್ಧಿಯಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ವೇಳೆ, ‘ಮೋದಿ ಯುಗದಲ್ಲಿ ಭಾರತ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದ್ದರೂ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ ವಾದ ಕಳವಳಕಾರಿ ವಿಷಯವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ಕುರಿತು ಉಭಯ ದೇಶಗಳು ಸದಾ ನಿಕಟ ಸಂಪರ್ಕದಲ್ಲಿರುತ್ತವೆ’ ಎಂದು ಹೇಳಿದರು.