ಚೀನಾ ಜತೆಗಿನ ಗಡಿ ಸಮಸ್ಯೆ ದೊಡ್ಡ ಸವಾಲು: ಸಿಡಿಎಸ್‌

| Published : Sep 06 2025, 01:00 AM IST

ಸಾರಾಂಶ

ಚೀನಾದೊಂದಿಗಿನ ಬಗೆಹರಿಯದ ಗಡಿ ಸಮಸ್ಯೆಗಳು ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲು. ಎರಡನೆಯ ಆಪತ್ತು ಪಾಕಿಸ್ತಾನ ನಡೆಸುವ ಪ್ರಾಕ್ಸಿ ಕದನ ಅಥವಾ ಅದು ಭಾರತಕ್ಕೆ ಮಾಡುವ ಸಾವಿರ ಗಾಯಗಳದ್ದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ। ಅನಿಲ್‌ ಚೌಹಾಣ್‌ ಹೇಳಿದ್ದಾರೆ.

ಭಾರತದ ಎದುರಿದೆ 5 ದೊಡ್ಡ ಸವಾಲುಗಳುಎದುರಿಸಲು ಭಾರತ ಸರ್ವಸನ್ನದ್ಧ ಆಗಿರಬೇಕು

ಸಿಂದೂರದಲ್ಲಿ ಎನ್‌ಎಸ್‌ಎ ಮಹತ್ವದ ಪಾತ್ರ

ನವದೆಹಲಿ: ಚೀನಾದೊಂದಿಗಿನ ಬಗೆಹರಿಯದ ಗಡಿ ಸಮಸ್ಯೆಗಳು ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲು. ಎರಡನೆಯ ಆಪತ್ತು ಪಾಕಿಸ್ತಾನ ನಡೆಸುವ ಪ್ರಾಕ್ಸಿ ಕದನ ಅಥವಾ ಅದು ಭಾರತಕ್ಕೆ ಮಾಡುವ ಸಾವಿರ ಗಾಯಗಳದ್ದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ। ಅನಿಲ್‌ ಚೌಹಾಣ್‌ ಹೇಳಿದ್ದಾರೆ. ಜತೆಗೆ, ಇದನ್ನು ಎದುರಿಸಲು ಸೇನೆ ಸಿದ್ಧವಾಗಿರಬೇಕು ಎಂದೂ ಕರೆ ನೀಡಿದ್ದಾರೆ.

ಉತ್ತರಪ್ರದೇಶದ ಗೋರಖಪುರದಲ್ಲಿ ಮಾತನಾಡಿದ ಅವರು, ‘ಚೀನಾದೊಂದಿಗಿನ ಗಡಿ ಸಮಸ್ಯೆ ಮೊದಲ ಹಾಗೂ ದೊಡ್ಡ ಸಮಸ್ಯೆ. ಎರಡನೆಯದೆಂದರೆ, ಆಗಾಗ ಸಣ್ಣಸಣ್ಣ ದಾಳಿ ಮಾಡುತ್ತಾ ಭಾರತಕ್ಕೆ ಗಾಯ ಮಾಡುತ್ತಿರುವ ಪಾಕಿಸ್ತಾನ. ಮೂರನೆಯ ಸವಾಲೆಂದರೆ, ನೆರೆಯ ರಾಷ್ಟ್ರಗಳಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಶಾಂತಿಯಿಂದ ಉಂಟಾಗಿರುವ ಪ್ರಾದೇಶಿಕ ಅಸ್ಥಿರತೆ. ನಾಲ್ಕನೆಯದ್ದು, ಬಾಹ್ಯಾಕಾಶ, ಸೈಬರ್‌ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಕ್ಷೇತ್ರದಲ್ಲಿ ನಡೆಯಲಿರುವ ಯುದ್ಧಗಳು. ಐದನೆಯದು, 2 ಅಣುಶಕ್ತ ರಾಷ್ಟ್ರಗಳಿಂದ(ಚೀನಾ, ಪಾಕ್‌) ಉಂಟಾಗಿರುವ ಬೆದರಿಕೆಯನ್ನು ಎದುರಿಸುವ ಸವಾಲು ಸಹ ಬಾರತದ ಎದುರಿದೆ. ಆದ್ದರಿಂದ ನಾವು ಸಾಂಪ್ರದಾಯಿಕ ಯುದ್ಧಕ್ಕೂ ಸದಾ ಸನ್ನದ್ಧರಾಗಿರಬೇಕು. ಆರನೆಯದ್ದು ತಂತ್ರಜ್ಞಾನ ಮತ್ತು ಅದರ ಪರಿಣಾಮ’ ಎಂದು ಹೇಳಿದರು. ಇದೇ ವೇಳೆ ಆಪರೇಷನ್‌ ಸಿಂದೂರದ ಬಗ್ಗೆ ಮಾತನಾಡುತ್ತಾ, ‘ಕಾರ್ಯಾಚರಣೆ ನಡೆಸಲು ಸೇನೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಅದರ ಉದ್ದೇಶ ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ಗಡಿಯಾಚೆಗಿನ ಭಯೋತ್ಪಾದನೆಗೆ ಕೆಂಪು ಗೆರೆ ಎಳೆಯುವುದೂ ಆಗಿತ್ತು’ ಎಂದರು. ಜತೆಗೆ, ಗುರಿಗಳ ಆಯ್ಕೆ, ಪಡೆಗಳ ನಿಯೋಜನೆ, ಉದ್ವಿಗ್ನತೆಯನ್ನು ಶಮನಕ್ಕೆ ಕ್ರಮ ಮತ್ತು ರಾಜತಾಂತ್ರಿಕತೆಯ ಬಳಕೆಯ ವಿಷಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮುಖ್ಯ ಪಾತ್ರ ವಹಿಸಿದರು ಎಂದೂ ಮೊದಲ ಬಾರಿ ಬಹಿರಂಗವಾಗಿ ಚೌಹಾಣ್‌ ಹೇಳಿದರು.

==

ಗಾಜಾ ಗಗನಚುಂಬಿ ಕಟ್ಟಡಕ್ಕೆ ಇಸ್ರೇಲ್‌ ಬಾಂಬ್: 27 ಸಾವು

ಗಾಜಾ: ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧ ಮುಂದುವರಿದಿದ್ದು, ಶುಕ್ರವಾರ ರಾತ್ರಿ ಇಸ್ರೇಲ್ ಸೇನೆ ಗಾಜಾ ನಗರದ ರಿಮಾಲ್‌ನಲ್ಲಿರುವ ಮುಶ್ತಾಹ ಗೋಪುರವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇತರೆಡೆ ಕೂಡ ದಾಳಿ ಮಾಡಿದೆ. ದಾಳಿಗಳಲ್ಲಿ ಒಂದೇ ಕುಟುಂಬದ 6 ಜನರು ಸೇರಿದಂತೆ 27 ಜನರು ಸಾವನ್ನಪ್ಪಿದ್ದಾರೆ ಎಂದು ಶಿಫಾ ಆಸ್ಪತ್ರೆ ದೃಢಪಡಿಸಿದೆ.ಇಸ್ರೇಲ್ ಗಾಜಾವನ್ನು ಯುದ್ಧವಲಯವೆಂದು ಘೋಷಿಸಿ, ನಗರವನ್ನು ಖಾಲಿ ಮಾಡುವ ಆದೇಶ ಹೊರಡಿಸಸಿದೆ. ಸದ್ಯದಲ್ಲೇ ಸೇನಾ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ನಿಖರ ದಾಳಿಗಳಾಗುವ ಎಚ್ಚರಿಕೆ ನೀಡಿದೆ.