ಸಾರಾಂಶ
- ಇದು ದಾರಿ ತಪ್ಪಿಸುವ ತಪ್ಪು ಹೇಳಿಕೆ: ಭಾರತ ಸರ್ಕಾರನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವರೋ ಅವರ, ಭಾರತದ ರಷ್ಯಾ ತೈಲ ಖರೀದಿಯ ಲಾಭ ಆಗುತ್ತಿರುವುದು ಬ್ರಾಹ್ಮಣರಿಗೆ ಎಂಬ ಹೇಳಿಕೆ ಸೇರಿ ವಿವಿಧ ಟೀಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವರೋ ಅವರು ನೀಡಿದ ತಪ್ಪಾದ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನಾವು ನೋಡಿದ್ದೇವೆ ಮತ್ತು ಸ್ಪಷ್ಟವಾಗಿ ನಾವು ಅವುಗಳನ್ನು ತಿರಸ್ಕರಿಸುತ್ತೇವೆ ಎಂದಿದೆ.
‘ರಷ್ಯಾದೊಂದಿಗಿನ ಸಂಬಂಧ ಕಡಿದುಕೊಳ್ಳಿ’ ಎಂಬ ಟ್ರಂಪ್ ಮಾತನ್ನು ಭಾರತ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ನವರೋ ಇತ್ತೀಚೆಗೆ ಭಾರತದ ವಿರುದ್ಧ ಅನೇಕ ಟೀಕೆ ಮಾಡಿದ್ದರು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇದಕ್ಕೆ ಪ್ರತಿಕ್ರಿಯಿಸಿ, ‘ನವರೋ ನೀಡುತ್ತಿರುವ ತಪ್ಪಾದ ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ. ಅವನ್ನು ತಿರಸ್ಕರಿಸುತ್ತೇವೆ’ ಎಂದು ಹೇಳಿದ್ದಾರೆ.‘ಭಾರತ ತೈಲ ತರಿಸಿಕೊಳ್ಳುತ್ತಿರುವುದರಿಂದಲೇ ರಷ್ಯಾಗೆ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಹಣ ಸಿಗುತ್ತಿದೆ. ಆದ್ದರಿಂದ ಅದು ಮೋದಿ ಯುದ್ಧ’ ಎಂದಿದ್ದ ನವರೋ, ‘ರಷ್ಯಾ ತೈಲದಿಂದ ಭಾರತದಲ್ಲಿರುವ ಬ್ರಾಹ್ಮಣರಿಗೆ(ಮೇಲ್ವರ್ಗದವರಿಗೆ) ಲಾಭವಾಗುತ್ತಿದೆ’ ಎಂದಿದ್ದರು. ಜತೆಗೆ, ಭಾರತವು ರಷ್ಯಾ ಮತ್ತು ಚೀನಾದೊಂದಿಗೆ ಹತ್ತಿರವಾಗುತ್ತಿರುವುದನ್ನು ಸಹಿಸಲಾಗದೆ, ‘ಮೋದಿ ಅವರು ಕ್ಸಿ ಮತ್ತು ಪುಟಿನ್ ಜತೆ ಹಾಸಿಗೆ ಹಂಚಿಕೊಳ್ಳುವುದನ್ನು ನೋಡಲು ಅಸಹ್ಯವಾಗುತ್ತಿದೆ. ಅವರು ಅಮೆರಿಕದ ಜತೆ ಇರಬೇಕು’ ಎಂದೂ ಹೇಳಿದ್ದರು.
==ಮೋದಿ - ಟ್ರಂಪ್ ಉತ್ತಮ ಸಂಬಂಧ ಅಂತ್ಯ: ಟ್ರಂಪ್ ಮಾಜಿ ಆಪ್ತ
- ಇದು ಬ್ರಿಟನ್ ಪ್ರಧಾನಿ ಸೇರಿ ಎಲ್ಲರಿಗೂ ಪಾಠ: ಜಾನ್ ಬಾಲ್ಟನ್ಪಿಟಿಐ ವಾಷಿಂಗ್ಟನ್‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ತುಂಬಾ ಒಳ್ಳೆಯ ವೈಯಕ್ತಿಕ ಸಂಬಂಧ ಹೊಂದಿದ್ದರು. ಆದರೆ ಅದು ಈಗ ಹೋಗಿಬಿಟ್ಟಿದೆ. ಅಮೆರಿಕದ ಜೊತೆ ನಿಕಟ ಸಂಬಂಧಗಳು ವಿಶ್ವನಾಯಕರನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ’ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಎಚ್ಚರಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿ ವಿರೋಧಿಸಿ ಭಾರತದ ಮೇಲೆ ಟ್ರಂಪ್ ಶೇ.50 ತೆರಿಗೆ ವಿಧಿಸಿ ಸಂಬಂಧ ಹಳಸಿದ ನಡುವೆಯೇ, ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡಿದ್ದ ಬಾಲ್ಟನ್ ಈ ಹೇಳಿಕೆ ನೀಡಿದ್ದಾರೆ.ಬ್ರಿಟಿಷ್ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ‘ಟ್ರಂಪ್ ವೈಯಕ್ತಿಕವಾಗಿ ಮೋದಿ ಜೊತೆ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು. ಆದರೆ ಅದು ಈಗ ಹೋಗಿಬಿಟ್ಟಿದೆ. ಇದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿ ಹಲವರಿಗೆ ಪಾಠ. ಉತ್ತಮ ಸಂಬಂಧ ಕೆಲವು ಸಲ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನೆಂದೂ ಕೆಟ್ಟದ್ದರಿಂದ ರಕ್ಷಿಸಲಾರದು’ ಎಂದಿದ್ದಾರೆ.ಸೆ.17-19ರವರೆಗೆ ಟ್ರಂಪ್ ಅವರ ಬ್ರಿಟನ್ ಪ್ರವಾಸ ನಿಗದಿಯಾಗಿರುವ ನಡುವೆಯೇ ಈ ಹೇಳಿಕೆ ಬಂದಿದೆ.