ಸಾರಾಂಶ
- ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಒತ್ತಾಯ
- ವಿಪಕ್ಷ ನಾಯಕರ ಜತೆ ಚರ್ಚಿಸಿ ಹೋರಾಟಕ್ಕೆ ನಿರ್ಧಾರ-----
ಇವಿಎಂ ಸಾಕು, ಮತಪತ್ರ ಬೇಕುಬಡವರು ಹಾಗೂ ದಮನಿತರ ಮತಗಳು ವ್ಯರ್ಥವಾಗಿ ಹೋಗುತ್ತಿವೆ. ಹೀಗಾಗಿ ಅವರೆಲ್ಲಾ ಇವಿಎಂ ಬೇಡ, ಮತಯಂತ್ರ ಬೇಕು ಎಂಬ ಆಗ್ರಹ ಮಾಡಬೇಕು, ಇವಿಎಂಗಳನ್ನು ಅವರೇ (ಬಿಜೆಪಿ) ಇಟ್ಟುಕೊಳ್ಳಲಿ, ನಮಗೆ ಇವಿಎಂ ಬೇಕಾಗಿಲ್ಲ, ನಾವು ಮತಪತ್ರಗಳನ್ನು ಬಯಸುತ್ತೇವೆ. ಆಗ ಬಿಜೆಪಿ ಯಾವ ಸ್ಥಾನದಲ್ಲಿದೆ ಎಂಬುದು ತಿಳಿಯುತ್ತದೆ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ------ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ವಿಪಕ್ಷಗಳ ಗಂಭೀರ ಆರೋಪದ ನಡುವೆಯೇ, ಇವಿಎಂ ಸಾಕು, ಹಿಂದಿನಂತೆ ಮತಪತ್ರ ಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ತಿರುಚಿದ ಕುರಿತು ಮಹಾ ಅಘಾಡಿ ಒಕ್ಕೂಟದ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಜೊತೆಗೆ ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾದರಿಯ ಅಭಿಯಾನ ನಡೆಸಬೇಕೆಂದು ಸಲಹೆ ನೀಡಿದ್ದಾರೆ.ಸಂವಿಧಾನ ರಕ್ಷಣಾ ಅಭಿಯಾನದ ಭಾಗವಾಗಿ ಮಂಗಳವಾರ ಇಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಖರ್ಗೆ, ‘ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿಗೆ ಈ ಚುನಾವಣೆ ಸಾಕಷ್ಟು ಮಹತ್ವದ್ದಾಗಿತ್ತು, ಏಕೆಂದರೆ ಅವರ ಭಾರೀ ಸಂಪತ್ತು ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಹೀಗಾಗಿ ಇಂಥವರನ್ನು ದೂರ ಸರಿಸಲು ನಾವೆಲ್ಲಾ ಒಂದಾಗಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.ಇದೇ ವೇಳೆ, ‘ನಾನು ಚುನಾವಣೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಬಡವರು ಹಾಗೂ ದಮನಿತರ ಮತಗಳು ವ್ಯರ್ಥವಾಗಿ ಹೋಗುತ್ತಿವೆ ಎಂಬುದನ್ನು ಖಚಿತವಾಗಿ ಹೇಳಬಲ್ಲೆ. ಹೀಗಾಗಿ ಅವರೆಲ್ಲಾ ಇವಿಎಂ ಬೇಡ, ಮತಯಂತ್ರ ಬೇಕು ಎಂಬ ಆಗ್ರಹ ಮಾಡಬೇಕು, ಇವಿಎಂಗಳನ್ನು ಅವರೇ (ಬಿಜೆಪಿ) ಇಟ್ಟುಕೊಳ್ಳಲಿ, ನಮಗೆ ಇವಿಎಂ ಬೇಕಾಗಿಲ್ಲ, ನಾವು ಮತಪತ್ರಗಳನ್ನು ಬಯಸುತ್ತೇವೆ. ಆಗ ಬಿಜೆಪಿ ಯಾವ ಸ್ಥಾನದಲ್ಲಿದೆ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.ಜೊತೆಗೆ, ನಮ್ಮ ಪಕ್ಷದಿಂದ ನಾವು ಇವಿಎಂ ಬದಲು ಮತಪತ್ರ ಬೇಕು ಎಂದು ಜನರಲ್ಲಿ ಅರಿವು ಮೂಡಿಸುವ ಅಭಿಯಾನ ಆರಂಭಿಸಬೇಕು. ಈ ಬಗ್ಗೆ ನಾನು ಇತರೆ ಪಕ್ಷಗಳೊಂದಿಗೂ ಮಾತುಕತೆ ನಡೆಸುತ್ತೇನೆ. ಈ ಹಿಂದೆ ಭಾರತ್ ಜೋಡೋ ಅಭಿಯಾನ ನಡೆಸಿದಂತೆ ಈ ವಿಷಯದಲ್ಲೂ ಅಭಿಯಾನ ಆರಂಭಿಸಬೇಕು ಎಂದು ನಾನು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುತ್ತೇನೆ’ ಎಂದು ಖರ್ಗೆ ಹೇಳಿದರು.