ಸಾರಾಂಶ
ಕೆಲವೇ ದಿನಗಳ ಹಿಂದೆ ಅಂಚಿನಲ್ಲಿ ಸಾವಿನಿಂದ ಪಾರಾಗಿದ್ದ ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತ ಶುಕ್ರವಾರ ಕಾರು ಅಪಘಾತದಿಂದ ನಿಧನರಾಗಿದ್ದಾರೆ. ಇವರ ತಂದೆಯೂ ಕಳೆದ ವರ್ಷ ಫೆಬ್ರವರಿಯಲ್ಲೇ ಕಾಕತಾಳೀಯವೆಂಬಂತೆ ನಿಧನ ಹೊಂದಿದ್ದರು.
ಹೈದರಾಬಾದ್: ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದ ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ (36) ಕಾರು ಅಪಘಾತದಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 5:30ಕ್ಕೆಅವರು ಪ್ರಯಾಣಿಸುತ್ತಿದ್ದ ಕಾರು ನಗರದ ಪಟಂಚೇರುವಿನ ಬಳಿ ರಿಂಗ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಮೆಟಲ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಚಾಲಕ ನಿದ್ರೆ ಮಂಪರಿನಲ್ಲಿ ಇದ್ದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಶೀಘ್ರವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಲಾಸ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಲಾಸ್ಯ ಅವರ ಸಾವಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬಿಆರ್‌ಎಸ್ ವರಿಷ್ಠ ಕೆ. ಚಂದ್ರಶೇಖರ್ ರಾವ್ ಸಂತಾಪ ಸೂಚಿಸಿದ್ದಾರೆ.
ಫೆ.13ರಂದು ಸಹ ಲಾಸ್ಯ ಅವರು ಚಲಿಸುತ್ತಿದ್ದ ಕಾರು ಅಪಘಾತವಾಗಿ ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.