ಸಾರಾಂಶ
ದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ, ಮತ್ತು ಗಂಗಾ ಪುನರುಜ್ಜೀವನಕ್ಕೆ ಮೀಸಲಿಟ್ಟಿರುವ ನಿಧಿ ಭಾರೀ ಏರಿಕೆ ಕಂಡಿದೆ. ಕಳೆದ ವರ್ಷ 19,516.92 ಕೋಟಿ ರು. ಇದ್ದ ಪಾಲನ್ನು ಈ ಬಾರಿ 30,233.83 ಕೋಟಿಗೆ ಹೆಚ್ಚಳ ಮಾಡಲಾಗಿದ್ದು, ಇದು ಶೇ.55 ಏರಿಕೆಯಾಗಿದೆ.
ಮುಖ್ಯವಾಗಿ ಗಂಗಾ ನದಿಯ ಪುನರುಜ್ಜೀವನಕ್ಕೆ ಸಂಬಂಧಿಸಿದ ನಮಾಮಿ ಗಂಗೆ ಮಿಷನ್-II ಹಾಗೂ ಪ್ರಮುಖ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ.
ನದಿಗಳನ್ನು ಸ್ವಚ್ಛಗೊಳಿಸುವ ಮತ್ತು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಗಂಗಾ ಯೋಜನೆಗೆ 3,345.70 ಕೋಟಿ ರು. ವ್ಯಯಿಸಲಾಗುವುದು ಹಾಗೂ ಇದು ಕಳೆದ ವರ್ಷಕ್ಕಿಂತ 2,400 ಕೋಟಿ ರು. ಏರಿಕೆಯಾಗಿದೆ.
ಇದರೊಂದಿಗೆ ಅಂತರ್ಜಲ ನಿರ್ವಹಣೆಗೆ ಸಂಬಂಧಿಸಿದ ಅಟಲ್ ಭೂಜಲ್ ಯೋಜನೆಗೆ 1,778 ಕೋಟಿ ರು. ಹಾಗೂ ರಾಷ್ಟ್ರೀಯ ಜಲವಿಜ್ಞಾನ ಯೋಜನೆಗೆ 661.20 ಕೋಟಿ ರು. ನಿಧಿಯನ್ನು ನಿಗದಿಪಡಿಸಲಾಗಿದೆ.
ಕೇಂದ್ರ ಪ್ರಾಯೋಜಿತ ಯೋಜನೆಗಳಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ 9,339.37 ಕೋಟಿ. ರು ಮತ್ತು ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಗೆ 592.11 ಕೋಟಿ ರು. ಖರ್ಚು ಮಾಡಲಾಗುವುದು.
ಇವುಗಳೊಂದಿಗೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮಗಳ ಮೂಲಕ ನದಿ ಹಾಗೂ ನೀರಾವರಿಗೆ ಸಂಬಂಧಿಸಿದ ಯೋಜನೆಗಳಿಗೆ ಆರ್ಥಿಕ ಬೆಂಬಲ ನೀಡುವುದಾಗಿ ವಿತ್ತ ಸಚಿವೆ ಮಾಹಿತಿ ನೀಡಿದರು.