ಪ್ರಬಲ ಭೂಕಂಪ ಸಂಭವಿಸಿದ ಬ್ಯಾಂಕಾಕ್‌ನಲ್ಲಿ ಶುಕ್ರವಾರ ನೋಡ ನೋಡುತ್ತಿದ್ದಂತೆಯೇ ಕಟ್ಟಡಗಳು ಧರೆಗೆ ಉರುಳಿ ಆತಂಕ ಸೃಷ್ಟಿಸಿದವು. ಇವುಗಳ ವಿಡಿಯೋ ವೈರಲ್‌ ಆಗಿದ್ದು ಎದೆ ಝಲ್ಲೆನಿಸುವಂತಿವೆ.

ಬ್ಯಾಂಕಾಕ್‌: ಪ್ರಬಲ ಭೂಕಂಪ ಸಂಭವಿಸಿದ ಬ್ಯಾಂಕಾಕ್‌ನಲ್ಲಿ ಶುಕ್ರವಾರ ನೋಡ ನೋಡುತ್ತಿದ್ದಂತೆಯೇ ಕಟ್ಟಡಗಳು ಧರೆಗೆ ಉರುಳಿ ಆತಂಕ ಸೃಷ್ಟಿಸಿದವು. ಇವುಗಳ ವಿಡಿಯೋ ವೈರಲ್‌ ಆಗಿದ್ದು ಎದೆ ಝಲ್ಲೆನಿಸುವಂತಿವೆ.

ನೋಡ ನೋಡುತ್ತಿದ್ದಂತೆ ಮುಗಿಲೆತ್ತರದ ಕಟ್ಟಡಗಳು ಧರೆಗೆ ಉರುಳುತ್ತಿಉವಂತೆಯೇ ಜನ ದಿಕ್ಕಾಪಾಲಾಗಿ ಓಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಆದರೆ ಇನ್ನೂ ಹಲವರು ಕಟ್ಟಡಗಳು ಬೀಳುತ್ತಿದ್ದಂತೆಯೇ ಅದರ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ.

ಬ್ಯಾಂಕಾಖ್‌ನ ಚಟುಚಾಟ್‌ ಮಾರುಕಟ್ಟೆ ಇಂಥ ಹಲವು ಕಟ್ಟಡ ಹೊಂದಿದ್ದು, ಧರೆಗುರುಳಿದ ಕಟ್ಟಡದ ದೃಶ್ಯಗಳು ದೃಶ್ಯಗಳು ಕರುಣಾಜನಕವಾಗಿವೆ.

ಮ್ಯಾನ್ಮಾರಲ್ಲಿ ನಿರಂತರ ಕಂಪನಕ್ಕೆ ಏನು ಕಾರಣ?

ಯಾಂಗೋನ್‌: ಮ್ಯಾನ್ಮಾರ್‌ ದೇಶವು ಸದಾ ಭೂಕಂಪನದ ಅಪಾಯ ಎದುರಿಸುವ ದೇಶಗಳಲ್ಲೊಂದು. ಭೂಕಂಪನದ ಅಪಾಯಯಾರಿ ದೇಶಗಳ ಭೂಪಟದಲ್ಲಿ ಮ್ಯಾನ್ಮಾರ್‌ ಡೇಂಜರ್‌ ಝೋನ್‌ನಲ್ಲಿದೆ. ಮ್ಯಾನ್ಯಾರ್‌ನಲ್ಲಿ ಸಗೈಂಗ್‌ ಫಾಲ್ಟ್‌ ಎಂಬ ಭೂರೇಖೆ ಹಾದು ಹೋಗಿರುವುದರಿಂದ ಭೂಕಂಪನದ ಅಪಾಯ ಹೆಚ್ಚು. ಸಗೈಂಗ್ ಎಂಬುದು ಮ್ಯಾನ್ಮಾರ್‌ನ ನಗರ ಆಗಿರುವ ಕಾರಣ ಅದಕ್ಕೆ ಆ ನಗರದ ಹೆಸರನ್ನೇ ಇಡಲಾಗಿದೆ.‘ಸಾಗೈಂಗ್ ಫಾಲ್ಟ್’ ಎಂಬುದು ಭೂಮಿಯಲ್ಲಿನ ಪ್ರಮುಖ ದೋಷವಾಗಿದ್ದು, ಇದರ ರೇಖೆಯು ಮಧ್ಯ ಮ್ಯಾನ್ಮಾರ್‌ನಿಂದ ಉತ್ತರ ಮ್ಯಾನ್ಮಾರ್‌ವರೆಗೆ ವ್ಯಾಪಿಸಿದೆ. ಈ ದೋಷವು ಭೂಮಿಯ ಭಾರತೀಯ ಮತ್ತು ಯುರೇಷಿಯನ್ ಫಲಕಗಳ ಚಲನೆಯಿಂದ ಉಂಟಾಗುತ್ತದೆ. ಚಲನೆಯ ದರಗಳು ವಾರ್ಷಿಕವಾಗಿ 11 ಮಿಮೀ ಮತ್ತು 18 ಮಿಮೀ ನಡುವೆ ಇರುತ್ತದೆ. ಇದು ಚಲಿಸುವ ವೇಳೆ ಕೆಲವೊಮ್ಮೆ ಭೂಮಿಯ ಅಂತರ್ಯದಲ್ಲಿ ಒತ್ತಡ ಸೃಷ್ಟಿಯಾಗಿ ಭೂಕಂಪವಾಗುತ್ತದೆ.

ಮ್ಯಾನ್ಮಾರ್, ಥಾಯ್ಲೆಂಡ್‌ಗೆ ನೆರವು: ಮೋದಿ ಘೋಷಣೆ

ನವದೆಹಲಿ: ಭೀಕರ ಭೂಕಂಪದಿಂದ ನಲುಗಿರುವ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ದೇಶಗಳಿಗೆ ಎಲ್ಲ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಟ್ವೀಟ್‌ ಮಾಡಿರುವ ಅವರು, ‘ಭೂಕಂಪದಿಂದ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಉಂಟಾಗಿರುವ ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತ ಸಾಧ್ಯವಿರುವ ಎಲ್ಲ ಸಹಾಯ ನೀಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಅಧಿಕಾರಿಗಳನ್ನು ಸನ್ನದ್ಧವಾಗಿರಲು ಕೇಳಿಕೊಂಡಿದ್ದೇನೆ. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದೇನೆ’ ಎಂದಿದ್ದಾರೆ.

ತಲೆ ತಿರುಗುತ್ತಿದೆ ಎಂದುಕೊಂಡೆ: ಜನರ ಭಯಾನಕ ಅನುಭವ

ಬ್ಯಾಂಕಾಕ್‌: ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದನ್ನು ಕಂಡು ದಂಗುಬಡಿದಿರುವ ಬ್ಯಾಂಕಾಕ್‌ ಜನ, ಭಯಾನಕ ಅನುಭವಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಇವರಲ್ಲಿ ಭಾರತೀಯರೂ ಉಂಟು.‘ಮೊದಮೊದಲು ನನ್ನ ತಲೆ ತಿರುಗುತ್ತಿದೆ ಎಂದುಕೊಂಡೆ. ಆದರೆ ಕೂಡಲೇ ಸಹೋದ್ಯೋಗಿಗಳೊಂದಿಗೆ 10ನೇ ಮಹಡಿಯಿಂದ ಕೆಳಗೆ ಓಡಿದೆ. ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಅಲುಗಾಡತೊಡಗಿತು’ ಎಂದು ಕನಿಛಾವಾನಾಕುಲ್‌ ಎಂಬಾಕೆ ಹೇಳಿದ್ದಾರೆ. 

ವಕೀಲೆಯೊಬ್ಬರು ಮಾತನಾಡಿ, ‘ಮೊದಲು ವಿದ್ಯುದ್ದೀಪ ತೂಗಾಡತೊಡಗಿತು. ಮೆಲ್ಲನೆ ಕಟ್ಟಡದಲ್ಲಿ ಸೀಳು ಬಿಟ್ಟ ಸದ್ದೂ ಕೇಳಿಸತೊಡಗಿದ್ದು, ಅದೂ ಅಲುಗತೊಡಗಿತು. ಜೀವಮಾನದಲ್ಲಿ ಬ್ಯಾಂಕಾಕ್‌ನಲ್ಲಿ ಇಂತಹ ಭೂಕಂಪ ನೋಡಿರಲಿಲ್ಲ’ ಎಂದರು. ಜನ ಜೀವಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದು, ಪ್ರೀತಿಪಾತ್ರರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದ ದೃಷ್ಯಗಳು ಸಾಮಾನ್ಯವಾಗಿತ್ತು.