ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ಮುಲಾಜಿಲ್ಲದೆ ಉಚ್ಚಾಟಿಸಬೇಕು : ಬೆಂಗ್ಳೂರಲ್ಲಿ ಬಿವೈವಿ ಬೆಂಬಲಿಗರಿಂದ ಸಭೆ

| N/A | Published : Feb 06 2025, 12:18 AM IST / Updated: Feb 06 2025, 05:10 AM IST

BY vijayendraa
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ಮುಲಾಜಿಲ್ಲದೆ ಉಚ್ಚಾಟಿಸಬೇಕು : ಬೆಂಗ್ಳೂರಲ್ಲಿ ಬಿವೈವಿ ಬೆಂಬಲಿಗರಿಂದ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಕೇಂದ್ರ ವರಿಷ್ಠರು ಮುಲಾಜಿಲ್ಲದೆ ಉಚ್ಚಾಟಿಸಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿರುವ ಮಾಜಿ ಸಚಿವರು, ಶಾಸಕರ ಬಣ ಒತ್ತಾಯಿಸಿದೆ.

 ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಕೇಂದ್ರ ವರಿಷ್ಠರು ಮುಲಾಜಿಲ್ಲದೆ ಉಚ್ಚಾಟಿಸಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿರುವ ಮಾಜಿ ಸಚಿವರು, ಶಾಸಕರ ಬಣ ಒತ್ತಾಯಿಸಿದೆ.

ಪಕ್ಷದ ಭಿನ್ನಮತೀಯ ಮುಖಂಡರಿಗೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರಾದ ಜೆ.ಪಿ.ನಡ್ಡಾ, ಅಮಿತ್‌ ಶಾ ಮತ್ತಿತರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಭೇಟಿ ಮಾಡಿದ್ದರೆ ಫೋಟೋ ಬಿಡುಗಡೆ ಮಾಡಲಿ ಎಂದು ಸವಾಲನ್ನೂ ಎಸೆದಿದೆ.

ಬುಧವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಸಂಪಂಗಿ, ಎಂ.ಡಿ.ಲಕ್ಷ್ಮೀನಾರಾಯಣ ಮತ್ತಿತರರು, ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುತ್ತಿರುವ ಭಿನ್ನಮತೀಯರನ್ನು ತಕ್ಷಣವೇ ಉಚ್ಚಾಟಿಸಬೇಕು ಎಂಬ ನಿರ್ಣಯ ಕೈಗೊಂಡರು.

ಜೆಸಿಬಿ ಓಡಿಸಿಕೊಂಡಿದ್ದೆ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮಿಸ್ಟರ್‌ ಯತ್ನಾಳ್‌ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದವರ ಬಗ್ಗೆ ಮಾತನಾಡುವ ನೀನು ಜೆಸಿಬಿ, ಬಸ್ಸು ಓಡಿಸಿಕೊಂಡಿದ್ದೆ. ಈಗ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕನಾಗಿದ್ದಿ. ಇದಕ್ಕೆ ಎಲ್ಲಿಂದ ದುಡ್ಡು ಬಂತು? ನಮಗೆ ನಿಮ್ಮ ಬಂಡವಾಳ ಗೊತ್ತಿಲ್ಲವೇ? ಎಂದು ಗುಡುಗಿದರು.ಈ ಹಿಂದೆ ಪಕ್ಷದಿಂದ ಅಮಾನತಾಗಿ ಯಡಿಯೂರಪ್ಪ ಅವರ ಕಾಲು ಹಿಡಿದವರು ಯಾರು? ಮಿಸ್ಟರ್‌ ಯತ್ನಾಳ್‌ ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು, ಆಗ ನಾವು ಗೌರವ ಕೊಡುತ್ತೇವೆ ಎಂದರು.

ಇವರು ಯಾರೂ ಮೂಲ ಬಿಜೆಪಿಯವರಲ್ಲ. ಸಿದ್ದೇಶ್ವರ್‌ ಸಂಸ್ಥೆ ನೀನು ಕಟ್ಟಿದ್ದಲ್ಲ. ಅಲ್ಲಿ ಬಂದು ಸಂಸ್ಥೆ ಕಬ್ಜಾ ಮಾಡಿದಿಯಲ್ಲ, ಮಗನನ್ನು ಅಲ್ಲಿ ನಿರ್ದೇಶಕನನ್ನಾಗಿ ಮಾಡಿದ್ದೀಯಲ್ಲ. ಇದು ಕುಟುಂಬ ರಾಜಕಾರಣ ಅಲ್ಲವೇ? ಎಂದು ಏಕವಚನದಲ್ಲೇ ಹರಿಹಾಯ್ದರು.

ಬಿರಿಯಾನಿ ಮರೆತುಬಿಟ್ರಾ?:

ಮಾತೆತ್ತಿದರೆ ನಾನೊಬ್ಬ ಹಿಂದೂ ಹುಲಿ ಎನ್ನುತ್ತೀರಿ. ಜೆಡಿಎಸ್‌ ಸೇರಿಕೊಂಡು ಟಿಪ್ಪೂ ಸುಲ್ತಾನ್‌ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್‌ ತಿಂದಿದ್ದನ್ನು ಮರೆತುಬಿಟ್ಟಿದ್ದೀರಾ? ಆಗ ನಿಮ್ಮ ನಿಜವಾದ ಹಿಂದುತ್ವ ಎಲ್ಲಿ ಹೋಗಿತ್ತು? ಇಫ್ತಾರ್‌ ಕೂಟದಲ್ಲಿ ಭಾಗಿಯಾದಾಗ ಬಿಜೆಪಿ ಸಿದ್ಧಾಂತ ನೆನಪಿರಲಿಲ್ಲವೇ? ಹಿಂದೂ ಹುಲಿ ಜೆಡಿಎಸ್‌ಗೆ ಹೋಗಿದ್ದು ಏಕೆ? ಮೊದಲು ಜನತೆಗೆ ಉತ್ತರ ಕೊಡಿ ಎಂದು ತೀಕ್ಷ್ಣವಾಗಿ ಹೇಳಿದರು.

ಕುಮಾರ್‌ ಬಂಗಾರಪ್ಪ ಕ್ರಿಮಿಕೀಟ:

ಮಾಜಿ ಸಚಿವ ಕುಮಾರ ಬಂಗಾರಪ್ಪ ವಿರುದ್ಧವೂ ಕೆಂಡ ಕಾರಿದ ರೇಣುಕಾಚಾರ್ಯ, ಮೊದಲು ಈತನನ್ನು ಪಕ್ಷದಿಂದ ಕಿತ್ತು ಹಾಕಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಏಕವಚನದಲ್ಲಿಯೇ ಹರಿಹಾಯ್ದರು.

ಮಿಸ್ಟರ್‌ ಕುಮಾರ್‌ ಬಂಗಾರಪ್ಪ, ನೀನು ಮೊದಲು ಎಲ್ಲಿದ್ದೆ? ಬಿಜೆಪಿಗೆ ಬರಲು ಎಷ್ಟು ಬಾರಿ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರ ಬಳಿ ಗೋಗರೆದೆ ಎಂಬುದು ಗೊತ್ತಿದೆ. ನೀನೊಬ್ಬ ಕ್ರಿಮಿಕೀಟ. ನಿನ್ನಂಥವನು ಎಲ್ಲೇ ಇದ್ದರೂ ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ಯಡಿಯೂರಪ್ಪ ಅವರ ಕುಟುಂಬದ ಋಣದದಿಂದ ಸೊರಬದಲ್ಲಿ ಗೆದ್ದು ಅಧಿಕಾರ ಅನುಭವಿಸಿದ್ದ ನೀನು ಅವರ ವಿರುದ್ಧವೇ ಷಡ್ಯಂತ್ರ ಮಾಡುತ್ತಿದ್ದಿಯ ಎಂದು ವಾಗ್ದಾಳಿ ನಡೆಸಿದರು.

ಮೂರ್ನಾಲ್ಕು ಜನ ಸೇರಿಕೊಂಡು ದೆಹಲಿಗೆ ಹೋಗಿ ನಿಮ್ಮ ಜೊತೆಗೆ ಎಲ್ಲರೂ ಇದ್ದಾರೆ ಎಂದು ಬಿಂಬಿಸಲು ಹೊರಟಿದ್ದೀರಿ. ರಾಷ್ಟ್ರೀಯ ನಾಯಕರನ್ನು ಎಷ್ಟು ಬಾರಿ ಭೇಟಿಯಾಗಿ ದೂರು ಕೊಡುತ್ತೀರಿ. ನಿಮ್ಮನ್ನು ಜನ ನೋಡಿ ಕಾಮಿಡಿ ಪೀಸ್‌ ಎಂದು ನಗುತ್ತಿದ್ದಾರೆ. ನಿಮ್ಮ ಹಣೆಬರಹಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್‌ ಶಾ ಸೇರಿ ಮತ್ತಿತರ ನಾಯಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.