ಸಾರಾಂಶ
ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಿಜೆಪಿ ಕಾರ್ಯಕರ್ತನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.
ತೀರ್ಥಹಳ್ಳಿ ತಾಲೂಕಿನ ಸಾಯಿಪ್ರಸಾದ್ ಎನ್ಐಎ ರಾಡರ್‌ಗೆ ಸಿಕ್ಕಿದ್ದು, ಈ ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್‌ಗಳಾದ ಶಂಕಿತ ಐಸಿಸ್ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಜತೆ ನಂಟು ಹೊಂದಿದ ಶಂಕೆ ಮೇರೆಗೆ ಸಾಯಿ ಪ್ರಸಾದ್‌ನನ್ನು ಎನ್‌ಐಎ ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.
ಕೆಫೆ ಸ್ಫೋಟದ ಕೃತ್ಯ ಸಂಬಂಧ ರಾಜ್ಯದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರು ಹಾಗೂ ಉತ್ತರಪ್ರದೇಶ ಮತ್ತು ತಮಿಳುನಾಡು ಸೇರಿ ಒಟ್ಟು 18 ಸ್ಥಳಗಳಲ್ಲಿ ಎನ್‌ಐಎ ಕಾರ್ಯಾಚರಣೆ ನಡೆಸಿತ್ತು. ಇದೇ ಪ್ರಕರಣದಲ್ಲಿ ಸ್ಫೋಟದ ಸಂಚಿಗೆ ಸಹಕರಿಸಿದ ಆರೋಪದ ಮೇರೆಗೆ ಚಿಕ್ಕಮಗಳೂರು ಜಿಲ್ಲೆ ಕಳಸದ ಮುಜಾಮಿಲ್ ಷರೀಫ್ ಬಂಧನವಾಗಿತ್ತು.
ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರ ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಎನ್‍ಐಎ ತಂಡ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವವರ ಮನೆಗೆ ಭೇಟಿ ನೀಡಿತ್ತು. ಜತೆಗೆ ಇಡೀ ದಿನ ಪಟ್ಟಣದ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹಿಸಿತ್ತು. ಗುರುವಾರ ಪುನಃ ತೀರ್ಥಹಳ್ಳಿಗೆ ಆಗಮಿಸಿದ ತಂಡ ವಿಚಾರಣೆ ಸಲುವಾಗಿ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿತ್ತು.
ಮೊಬೈಲ್ ಅಂಗಡಿಯಲ್ಲಿ ಸ್ನೇಹ:
ಶಿವಮೊಗ್ಗ ಐಸಿಸ್ ಮಾಡ್ಯೂಲ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಶಾಜಿಬ್ ಸಂಪರ್ಕ ಜಾಲವನ್ನು ಎನ್‌ಐಎ ಶೋಧಿಸುತ್ತಿದೆ. ಅಂತೆಯೇ ಈ ಜಾಲದ ಜತೆ ನಿಕಟ ಸ್ನೇಹ ಹೊಂದಿದ್ದ ಸಾಯಿ ಪ್ರಸಾದ್‌ನನ್ನು ಸಹ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ತಾಹಾ ಗುಂಪಿನ ಸದಸ್ಯನ ಮೊಬೈಲ್ ಅಂಗಡಿಗೆ ಸಾಯಿಪ್ರಸಾದ್ ನಿರಂತರವಾಗಿ ಹೋಗುತ್ತಿದ್ದ. ಅಲ್ಲದೇ ಇದೇ ಗೆಳೆತನದಲ್ಲಿ ಆತ ಸುತ್ತಾಡುತ್ತಿದ್ದ ಎನ್ನಲಾಗಿದೆ.
ವದಂತಿಗೆ ಕಿವಿಗೊಡಬೇಡಿ: ಎನ್‌ಐಎ ಮನವಿ
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ತನಿಖೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಯಾರೊಬ್ಬರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಎನ್‌ಐಎ ಹೇಳಿದೆ.
ಕೆಫೆ ಕೃತ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಬಾಂಬ್ ಇಟ್ಟವನಾಗಿದ್ದರೆ, ಅಬ್ದುಲ್ ಮತೀನ್ ತಾಹಾ ಸಂಚುಕೋರನಾಗಿದ್ದಾನೆ. ಇದೇ ಕೃತ್ಯಕ್ಕೆ ಲಾಜಿಸ್ಟಿಕ್ಸ್ ನೆರವು ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಮುಜಾಮಿಲ್ ಷರೀಫ್‌ನನ್ನು ಬಂಧಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಹ ತನಿಖೆ ನಡೆದಿದೆ ಎಂದು ಎನ್‌ಐಎ ತಿಳಿಸಿದೆ.
ಈ ಕೃತ್ಯದ ಸಂಬಂಧ ಹಲವು ಪುರಾವೆಗಳನ್ನು ಕೆಲ ಹಾಕಲಾಗಿದೆ. ತನಿಖೆಯಲ್ಲಿ ಲಭ್ಯವಾದ ಮಾಹಿತಿ ಮೇರೆಗೆ ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಸ್ನೇಹಿತರು, ಕಾಲೇಜು ಸಹಪಾಠಿಗಳು ಕೂಡಾ ಸೇರಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಕಾರಣ ಖಚಿತವಲ್ಲದ ಸುದ್ದಿಗಳನ್ನು ಹರಡದಂತೆ ಎನ್‌ಐಎ ಮನವಿ ಮಾಡಿದೆ.
ಉಗ್ರರ ಜತೆ ನಂಟು?
- ಶಿವಮೊಗ್ಗ ಐಸಿಸ್ ಮಾಡ್ಯೂಲ್‌ನ ಅಬ್ದುಲ್ ಮತೀನ್ ತಾಹಾ, ಮುಸಾವೀರ್ ಶಾಜಿಬ್‌ರ ಸಂಪರ್ಕ ಜಾಲ ಶೋಧಿಸುತ್ತಿರುವ ಎನ್‌ಐಎ
- ಇವರೇ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಶಂಕೆ
- ತೀರ್ಥಹಳ್ಳಿಯಲ್ಲಿ ತಾಹಾ ಗುಂಪಿನ ಸದಸ್ಯನ ಮೊಬೈಲ್ ಅಂಗಡಿಗೆ ಆಗಾಗ ಹೋಗುತ್ತಿದ್ದ ಸಾಯಿಪ್ರಸಾದ್
- ಇದೇ ಗೆಳೆತನದಲ್ಲಿ ಅವರ ಜೊತೆ ಸುತ್ತಾಟ, ಹೀಗಾಗಿ ಎನ್‌ಐಎಗೆ ಸಾಯಿಪ್ರಸಾದ್ ಮೇಲೂ ಅನುಮಾನ
- ಸಾಯಿಪ್ರಸಾದ್‌ನ ಮೊಬೈಲ್ ದುರ್ಬಳಕೆಯಾಗಿದೆ, ಹೀಗಾಗಿ ಅವನನ್ನು ವಿಚಾರಣೆ ಮಾಡಿ ಬಿಡುಗಡೆ ಮಾಡಿದ್ದಾರೆ: ಬಿಜೆಪಿ