ನಮ್ಮ ಪಾಲಿಗೆ ಭಾರತ ಬೆದರಿಕೆ: ಕೆನಡಾ ಆರೋಪ

| Published : Feb 04 2024, 01:36 AM IST / Updated: Feb 04 2024, 08:15 AM IST

ಸಾರಾಂಶ

2022ರಲ್ಲಿನ ರಹಸ್ಯ ಕಡತದ ಮಾಹಿತಿ ಈಗ ಸೋರಿಕೆಯಾಗಿದ್ದು, ಭಾರತವು ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವುದಾಗಿ ತಿಳಿಸಿದೆ.

ಒಟ್ಟಾವಾ: ಖಲಿಸ್ತಾನಿ ಉಗ್ರರ ವಿಚಾರದಲ್ಲಿ ಭಾರತ-ಕೆನಡಾ ಸಂಬಂಧ ಹಳಸಿರುವ ನಡುವೆಯೇ ‘ಕೆನಡಾ ಪಾಲಿಗೆ ಭಾರತ ಬೆದರಿಕೆಯಾಗಿದೆ’ ಎಂದು 2022ರಲ್ಲಿ ಬರೆಯಲಾಗಿದ್ದ ದಾಖಲೆಯೊಂದರ ಅಂಶಗಳು ಈಗ ಬಯಲಾಗಿವೆ. ಇದು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಮತ್ತಷ್ಟು ಹುಳಿ ಹಿಂಡುವ ಸಾಧ್ಯತೆ ಇದೆ.

ಕೆನಡಾ ಚುನಾವಣೆಯಲ್ಲಿ ಭಾರತವು ಹಸ್ತಕ್ಷೇಪ ಮಾಡುವ ಕುರಿತಾಗಿ ಗುಪ್ತಚರ ಇಲಾಖೆಗೆ ಸಂಬಂಧಿಸಿದ ದಾಖಲೆ ಇದಾಗಿದೆ. ಇದರಲ್ಲಿ ಭಾರತವನ್ನು ‘ವಿದೇಶಿ ಬೆದರಿಕೆ’ ಎಂದು ಉಲ್ಲೇಖಿಸಲಾಗಿದೆ ಎಂದು ಗ್ಲೋಬಲ್‌ ನ್ಯೂಸ್‌ ಸಂಸ್ಥೆ ವರದಿ ಮಾಡಿದೆ. 

‘ಕೆನಡಾ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈ ರೀತಿ ವಿದೇಶಿ ಹಸ್ತಕ್ಷೇಪದಿಂದಾಗಿ ಕೆನಡಾದಲ್ಲಿ ಪ್ರಜಾಪ್ರಭುತ್ವವು ಕುಂಠಿತವಾಗುವ ಸಾಧ್ಯತೆಯಿದೆ’ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ವರದಿಯ ಕುರಿತು ತನಿಖೆಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆದೇಶಿಸಿದ್ದಾರೆ.