ಸಾರಾಂಶ
- ಉಗ್ರರ ಹೆಡೆಮುರಿ ಕಟ್ಟುತ್ತೇವೆ । ಮೋದಿ ಅಧ್ಯಕ್ಷತೆಯ ಸಂಪುಟ ಸಭೆ ಸಂಕಲ್ಪ
---- ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ
- ಕೆಂಪುಕೋಟೆ ಬಳಿ ಸ್ಫೋಟ ಖಂಡಿಸಿ ನಿರ್ಣಯ ಅಂಗೀಕಾರ-ಅಪರಾಧಿಗಳನ್ನು ತುರ್ತು ಹೆಡೆಮುರಿ ಕಟ್ಟಲು ಪಡೆಗಳಿಗೆ ತಾಕೀತು
-ರಾಷ್ಟ್ರೀಯ ಭದ್ರತೆ, ಪ್ರತಿ ನಾಗರಿಕನ ಸುರಕ್ಷತೆಗೆ ಸರ್ಕಾರ ಬದ್ಧ- ಸ್ಫೋಟದ ಹಿಂದಿನ ಶಕ್ತಿಗಳ ಶಿಕ್ಷಿಸದೇ ಬಿಡಲ್ಲ: ಮೋದಿ ಎಚ್ಚರಿಕೆ
==ಪಿಟಿಐ ನವದೆಹಲಿ
ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟವನ್ನು ‘ಭಯೋತ್ಪಾದಕ ಕೃತ್ಯ’ ಎಂದು ಮೊದಲ ಬಾರಿ ಕರೆದಿರುವ ಕೇಂದ್ರ ಸರ್ಕಾರ, ಅಪರಾಧಿಗಳು ಮತ್ತು ಅವರ ಪ್ರಾಯೋಜಕರನ್ನು ಹೆಡೆಮುರಿ ಕಟ್ಟಲು ಅತ್ಯಂತ ತುರ್ತು ಮತ್ತು ವೃತ್ತಿಪರತೆಯಿಂದ ಕೆಲಸ ಮಾಡುವಂತೆ ತನಿಖಾ ಸಂಸ್ಥೆಗಳಿಗೆ ಬುಧವಾರ ತಾಕೀತು ಮಾಡಿದೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತಾದ ಸಂಪುಟ ಸಭೆಯಲ್ಲಿ, ಘಟನೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಗಿದೆ.ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ತೆರಳಿ ಕೆಂಪುಕೋಟೆ ಸ್ಫೋಟದಲ್ಲಿ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ, ಈ ದುಷ್ಕತ್ಯ ಎಸಗಿದವರಿಗೆ ತಕ್ಕ ಶಿಕ್ಷೆ ವಿಧಿಸುವ ಭರವಸೆ ನೀಡಿದರು.
ಸಂಪುಟ ಖಂಡನಾ ನಿರ್ಣಯ:ಭೂತಾನ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಬುಧವಾರ ದೆಹಲಿಗೆ ಹಿಂದಿರುಗುತ್ತಿದ್ದಂತೆ ಸಚಿವರು ಹಾಗೂ ಪ್ರಮುಖ ಅಧಿಕಾರಿಗಳ ಜೊತೆ ಭದ್ರತಾ ವ್ಯವಹಾರಗಳ ಸಂಪುಟ ಸಭೆ ನಡೆಸಿದರು. ಈ ವೇಳೆ ಸ್ಫೋಟದಲ್ಲಿ ಮೃತಪಟ್ಟವರಿಗೆ 2 ನಿಮಿಷ ಮೌನಾಚರಣೆ ಮೂಲಕ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ನಂತರ ವಿಸ್ತೃತ ಚರ್ಚೆಯ ಬಳಿಕ ಘಟನೆಯನ್ನು ಖಂಡಿಸಿ ನಿರ್ಣಯವೊಂದನ್ನು ಅಂಗೀಕರಿಸಲಾಯಿತು.
‘ಸ್ಫೋಟದ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ಮುಂದುವರಿಸಬೇಕೆಂದು ಸಚಿವ ಸಂಪುಟ ನಿರ್ದೇಶಿಸುತ್ತದೆ. ಇದರಿಂದಾಗಿ ಅಪರಾಧಿಗಳು, ಅವರ ಸಹಕಾರಿಗಳು ಮತ್ತು ಪ್ರಾಯೋಜಕರನ್ನು ವಿಳಂಬವಿಲ್ಲದೆ ಗುರುತಿಸಿ ನ್ಯಾಯಕ್ಕೆ ತರಲಾಗುತ್ತದೆ. ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದೊಂದು ಅರ್ಥಹೀನ ಹಿಂಸಾತ್ಮಕ ಮತ್ತು ಹೇಡಿತನದ ಕೃತ್ಯವಾಗಿದೆ. ಮೃತಪಟ್ಟವರ ಕುಟುಂಬಕ್ಕೆ ನಮ್ಮ ಹೃದಯಾಂತರಾಳದ ಸಂತಾಪಗಳು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.‘ವಿಶ್ವಾದ್ಯಂತ ಅನೇಕ ಸರ್ಕಾರಗಳ ಒಗ್ಗಟ್ಟು ಮತ್ತು ಬೆಂಬಲದ ಹೇಳಿಕೆಗಳಿಗೆ ಧನ್ಯವಾದಗಳು. ಸರಿಯಾದ ಸಮಯಕ್ಕೆ ಏಕತೆಯಿಂದ ಪ್ರತಿಕ್ರಿಯಿಸಿದ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯ ಮತ್ತು ಸಹಾನುಭೂತಿಯಿಂದ ವರ್ತಿಸಿದ ನಾಗರಿಕರಿಗೂ ಅಭಿನಂದನೆಗಳು. ಇವರೆಲ್ಲರ ಸಮರ್ಪಣೆ ಮತ್ತು ಕರ್ತವ್ಯಪ್ರಜ್ಞೆ ಶ್ಲಾಘನೀಯ. ರಾಷ್ಟ್ರೀಯ ಭದ್ರತೆ ಮತ್ತು ಪ್ರತಿಯೊಬ್ಬ ನಾಗರಿಕನ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಅನುಗುಣವಾಗಿ, ಎಲ್ಲಾ ಭಾರತೀಯರ ಜೀವನ ಮತ್ತು ಯೋಗಕ್ಷೇಮವನ್ನು ಕಾಪಾಡುವ ದೃಢ ಸಂಕಲ್ಪವನ್ನು ಸರ್ಕಾರ ಪುನರುಚ್ಚರಿಸುತ್ತದೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗೆ ಮೋದಿ:ಇದಕ್ಕೂ ಮುನ್ನ ಮೋದಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಕ್ಷೇಮ ವಿಚಾರಿಸಿದರು. ಭೇಟಿ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ’ನಾನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ತೆರಳಿ ದೆಹಲಿ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದೆ. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ. ಆ ಸ್ಫೋಟದ ಹಿಂದೆ ಯಾರೇ ಭಾಗಿಯಾಗಿದ್ದರೂ ಅವರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆ ಭೇಟಿ ವೇಳೆ ಮೋದಿ ಅವರು ಕೆಲಕಾಲ ಗಾಯಾಳುಗಳ ಜತೆಗೆ ಮಾತುಕತೆ ನಡೆಸಿದರು. ಬಳಿಕ ಅಧಿಕಾರಿಗಳು ಹಾಗೂ ವೈದ್ಯರಿಂದಲೂ ಗಾಯಾಳುಗಳ ಪರಿಸ್ಥಿತಿ ಕುರಿತು ವಿವರಣೆ ಪಡೆದರು.
;Resize=(128,128))
;Resize=(128,128))
;Resize=(128,128))
;Resize=(128,128))